ಇತ್ತೀಚೆಗಷ್ಟೇ ನಿರ್ದೇಶಕ ಸಂತೋಷ್ ಆನಂದರಾಮ್ ಅವರ ನಿಶ್ಚಿತಾರ್ಥ ನೆರವೇರಿತ್ತು. ಈಗ ಮತ್ತೂಬ್ಬ ನಿರ್ದೇಶಕ ಕೂಡ ತನ್ನ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದು ಬೇರಾರೂ ಅಲ್ಲ, ಪವನ್ ಒಡೆಯರ್.
ಪವನ್ ಒಡೆಯರ್ ನಿಶ್ಚಿತಾರ್ಥ ಮುಂದಿನ ತಿಂಗಳು ನಡೆಯಲಿದ್ದು, ಮುಂದಿನ ವರ್ಷದ ಆಗಸ್ಟ್‌ನಲ್ಲಿ ಅವರು ಹಸೆಮಣೆ ಏರಲಿದ್ದಾರೆ. ಇಷ್ಟಕ್ಕೂ ಈ ಪವನ್ ಒಡೆಯರ್ ಮದುವೆಯಾಗಲಿರುವ ಹುಡುಗಿ ಯಾರು ಗೊತ್ತಾ? ಅಪೇಕ್ಷಾ ಪುರೋಹಿತ್. ಸೀತಾರಾಮ್ ನಿರ್ದೇಶನದ “ಕಾಫಿ ತೋಟ’ ಚಿತ್ರದ ನಾಯಕಿಯಾಗಿ ನಟಿಸಿದ್ದರು ಅಪೇಕ್ಷಾ ಪುರೋಹಿತ್.
ಕಳೆದ ಸೆಪ್ಟೆಂಬರ್‌ನಲ್ಲೇ ಪವನ್ ಒಡೆಯರ್ ಹಾಗು ಅಪೇಕ್ಷಾ ಪುರೋಹಿತ್ ಅವರ ಮನೆಯವರು ಇವರಿಬ್ಬರ ಮದುವೆಯ ಮಾತುಕತೆ ನಡೆಸಿದ್ದರು. ಪವನ್ ಫ್ಯಾಮಿಲಿ ಮತ್ತು ಅಪೇಕ್ಷಾ ಫ್ಯಾಮಿಲಿ ಅವರಿಗೆ ಹತ್ತಿರವಾಗಿರುವ ಗೆಳೆಯರೊಬ್ಬರ ಮೂಲಕ ಮುಂದಿನ ದಿನಗಳಲ್ಲಿ ಇವರಿಬ್ಬರು ಸತಿಪತಿಗಳಾಗುತ್ತಿದ್ದಾರೆ.
ಅಪೇಕ್ಷಾ ಪುರೋಹಿತ್ ಅವರದು ಮೂಲತಃ ಬಾಗಲಕೋಟೆ. ಫ್ಯಾಷನ್ ಡಿಸೈನರ್ ಆಗಿರುವ ಅಪೇಕ್ಷಾ ಬಗ್ಗೆ ತಿಳಿದುಕೊಂಡ ಪವನ್ ಒಡೆಯರ್, ಮನೆಯವರ ಜತೆ ಮಾತನಾಡಿ, ಮನೆಯವರ ಸಮ್ಮತಿ ಮುಖಾಂತರ ಡಿಸೆಂಬರ್ 7 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
2018ರ ಆಗಸ್ಟ್‌ನಲ್ಲಿ ಮದುವೆ ನಡೆಯಲಿದೆ ಎಂದು ವಿವರ ಕೊಡತ್ತಾರೆ ಪನವ್ ಒಡೆಯರ್. ಸದ್ಯಕ್ಕೆ ಹೊಸ ಸಿನಿಮಾ ನಿರ್ದೇಶನ ಮಾಡಲು ತಯಾರಿ ನಡೆಸಿರುವ ಪವನ್ ಒಡೆಯರ್‌ಗೆ ಅಪೇಕ್ಷಾ ಈಗ “ಗೂಗ್ಲಿ’ ಎಸೆದಿರುವುದಂತೂ ನಿಜ.