ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರನ್ನು ನೋಡಿ ಹೆದರಿಕೊಂಡು ಸಿದ್ದರಾಮಯ್ಯ ಏನೇನೋ ಮಾತಾಡುತ್ತಿದ್ದಾರೆ. ಮುಖ್ಯಮಂತ್ರಿಯಾದಂವರು ತನ್ನ ಕ್ಷೇತ್ರ ಉಳಿಸಿಕೊಳ್ಳಲು ಆಗದೆ ಯಾರದೋ ಒಬ್ಬರ ಮೇಲೆ ಬೊಟ್ಟು ಮಾಡಬಾರದು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್ ಡಿಕೆ ನಡುವಿನ ಮಾತಿನ ಜಟಾಪಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಆಡಳಿತ ನಡೆಸಿದವರು ಹಾಗೂ ಒಂದು ಪಕ್ಷದ ನೇತೃತ್ವ ವಹಿಸಿದವರು ಒಂದು ಇತಿಮಿತಿ ಒಳಗೆ ಮಾತನಾಡಬೇಕು. ಅವರ ಮಾತುಗಳಲ್ಲಿ ಹತೋಟಿ ಇರಬೇಕು. ಸಾರ್ವಜನಿಕರಲ್ಲಿ ಅವರು ಒಪ್ಪಿಗೆ ಪಡೆಯುವ ರೀತಿ ಇರಬೇಕು. ಆದರೆ ಅವರು ಇದನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ, ಇಂತಹ ನಡವಳಿಕೆ ಅವರಿಬ್ಬರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ಇದನ್ನೂ ಓದಿ:ಯಾರೋ ಕಟ್ಟಿದ್ದ ಹುತ್ತದಲ್ಲಿ ಹಾವು ಸೇರಿಕೊಂಡಂತೆ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ: ಈಶ್ವರಪ್ಪ
ಕುಮಾರಸ್ವಾಮಿ ಒಂದು ದೊಡ್ಡ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ಇವಾಗ ತನ್ನ ಪಕ್ಷ ಮುಗಿಯುವ ಹಂತಕ್ಕೆ ಬರುತ್ತಿದೆ. ಹೀಗಿರುವಾಗ ಅವರು ತಮ್ಮ ಇತಿಮಿತಿ ಒಳಗೆ ಮಾತನಾಡಬೇಕು. ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ನೋಡಿ ಹೆದರಿಕೊಂಡು ಏನೇನೋ ಮಾತಾನಾಡುತ್ತಿದ್ದಾರೆ. ಇದೆಲ್ಲಾ ಅವರಿಗೆ ಆಗಬಾರದು, ಇಬ್ಬರಿಗೂ ಒಳ್ಳೆಯದಲ್ಲ ಎಂದರು.
ಸೋತಮೇಲೆ ಕಾರಣ ಹುಡುಕೋದು ಸಹಜ. ಒಬ್ಬ ಸಿಎಂ ಆದಂತವರು ತನ್ನ ಕ್ಷೇತ್ರ ಉಳಿಸಿಕೊಳ್ಳಲಾಗದೆ ಯಾರದ್ದೋ ಒಬ್ಬರ ಮೇಲೆ ಬೊಟ್ಟು ಮಾಡಬಾರದು. ಇದರಿಂದ ಸಣ್ಣತನ ತೋರಿಸುವಂತೆ ಆಗಬಾರದು ಎಂದ ಸದಾನಂದ ಗೌಡ ಕಿವಿಮಾತು ಹೇಳಿದರು.
ಇವರಿಬ್ಬರಲ್ಲಿ ಒಳ ಒಪ್ಪಂದದ ಜನಕ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ, ಆದರೆ ನಾವು ಯಾರು ಯಾರ ಜೊತೆಯೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳೋದಿಲ್ಲ ಎಂದರು.