ಮಂಗಳೂರು: ಕೋವಿಡ್ -19 ಆತಂಕದ ನಡುವೆಯೇ ಎಸ್ಎಸ್ಎಲ್ ಸಿ ಪರೀಕ್ಷೆಗಳು ಇಂದು ಆರಂಭವಾಗಿದೆ. ಸೋಂಕು ಆತಂಕವಿದ್ದರೂ, ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಕ್ರಮ ಕೈಗೊಂಡಿದೆ. ಮಂಗಳೂರಿನ ಪರೀಕ್ಷಾ ಕೇಂದ್ರಗಳ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಕೇಂದ್ರಗಳಿಗೆ ಭೇಟಿ ನೀಡಿದರು.
ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ರಾಮಕೃಷ್ಣ ಪ್ರೌಢ ಶಾಲೆಗೆ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಭೇಟಿ ನೀಡಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಗಳು ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಖುದ್ದು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಎಲ್ಲಾ ಕಡೆ ಯಾವುದೇ ಅವ್ಯವಸ್ಥೆ ಆಗದ ಹಾಗೆ ನೋಡಿಕಂಡಿದ್ದೇವೆ ಎಂದರು.
ಪಕ್ಕದ ಕಾಸರಗೋಡು ಜಿಲ್ಲೆಯಿಂದ 367 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಮ್ಮ ಜಿಲ್ಲೆಗೆ ಬಂದಿದ್ದಾರೆ. ಪರೀಕ್ಷೆ ಮುಗಿದ ನಂತರ ಸುರಕ್ಷಿತವಾಗಿ ಅವರನ್ನು ಮರಳಿ ಮನೆಗೆ ಬಿಡುತ್ತೇವೆ. ಕಾಸರಗೋಡುನಿಂದ ಯಾರೂ ಪರೀಕ್ಷೆ ಗೆ ಗೈರು ಹಾಜರಾಗಿಲ್ಲ ಎಂದರು.
ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಗಳು ಕೋವಿಡ್-19 ಸೋಂಕಿನ ಕಾರಣದಿಂದ ಮುಂದೂಡಿಕೆಯಾಗಿದ್ದವು. ಸದ್ಯ ಪರ ವಿರೋಧ ಚರ್ಚೆಯ ನಡೆವೆಯೂ ರಾಜ್ಯ ಸರ್ಕಾರ ಸಕಲ ಸುರಕ್ಷಿತಾ ವ್ಯವಸ್ಥೆಗಳೊಂದಿಗೆ ಪರೀಕ್ಷೆ ನಡೆಸುತ್ತಿದೆ.