Advertisement

D.K,Udupi; ಎಪಿಎಲ್‌ ಅಕ್ಕಿಗೆ ಬೇಡಿಕೆ; ಸರಕಾರ ಮೌನ!

12:01 AM Jan 17, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯಡಿ ಪೂರೈಸಲಾಗುತ್ತಿರುವ ಅಕ್ಕಿಗೆ ಎಪಿಎಲ್‌ ಪಡಿತರದಾರರಿಂದಲೂ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಸದ್ಯ ಸರಕಾರದಿಂದ ಎಪಿಎಲ್‌ ಪಡಿತರದಾರರಿಗೆ ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ವಿತರಣೆ ನಡೆಯುತ್ತಿಲ್ಲ. ಅಕ್ಕಿ ನೀಡದೆ ವರ್ಷ ಸಮೀಪಿಸುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ.

Advertisement

ಜನರ ಬೇಡಿಕೆಯ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈಗಾಗಲೇ ಮೇಲಾಧಿಕಾರಿಗಳಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಆದರೆ ಸರಕಾರದ ಮುಂದಿನ ಆದೇಶದ ವರೆಗೆ ಅಕ್ಕಿ ದೊರೆಯುವುದು ಕಷ್ಟ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಾರ ದ.ಕ. ಜಿಲ್ಲೆ ಯಲ್ಲಿ 1,73,734 ಮತ್ತು ಉಡುಪಿ ಜಿಲ್ಲೆಯಲ್ಲಿ 1,15,127 ಎಪಿಎಲ್‌ ಪಡಿತರ ಕಾರ್ಡ್‌ಗಳಿವೆ. ಈ ಮೊದಲು ಸರಕಾರದಿಂದ ಪೂರೈಕೆ ಇದ್ದಾಗ ಉಡುಪಿ ನಗರದಲ್ಲಿ 40 ಕ್ವಿಂಟಾಲ್‌ ಮತ್ತು ಉಳಿದ ತಾಲೂಕುಗಳಲ್ಲಿ 5-10 ಕ್ವಿಂಟಾಲ್‌ ಒಟ್ಟು 45-50 ಕ್ವಿಂಟಾಲ್‌ ಅಕ್ಕಿ ವಿತರಣೆಯಾಗುತಿತ್ತು. ದ.ಕ. ಜಿಲ್ಲೆಯಲ್ಲಿ ಸುಮಾರು 100 ಕ್ವಿಂಟಾಲ್‌ನಷ್ಟು ಎಪಿಎಲ್‌ನವರಿಗೆ ಪೂರೈಕೆಯಾಗುತ್ತಿತ್ತು. ಪ್ರಸ್ತುತ ಬಿಪಿಎಲ್‌ ಅಕ್ಕಿ ಉಳಿಕೆಯಾದರೂ, ಎಪಿಎಲ್‌ವರಿಗೆ ನೀಡುತ್ತಿಲ್ಲ. ಬದಲಾಗಿ ಮುಂದಿನ ತಿಂಗಳ ಇಂಡೆಂಟ್‌ನಲ್ಲಿ ಕಡಿಮೆ ಮಾಡಿ ಸರಿದೂಗಿಸಲಾಗುತ್ತಿದೆ ಎನ್ನುತ್ತಾರೆ ಇಲಾಖಾ ಉಪನಿರ್ದೇಶಕರು.

ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯಡಿ ಪ್ರತೀ ತಿಂಗಳು ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಹಾಗೂ ಪ್ರತಿಯೊಬ್ಬ ಆದ್ಯತಾ ಪಡಿತರ ಚೀಟಿ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿ ನೀಡಲಾಗುತ್ತಿದೆ.

ದ.ಕ.ದಲ್ಲಿ ಕೇಂದ್ರ ಸರಕಾರದಿಂದ ಎಪ್ರಿಲ್‌ 2023ರಿಂದ ಡಿಸೆಂಬರ್‌ ವರೆಗೆ4,86,381.96 ಕ್ವಿಂಟಾಲ್‌ ಅಕ್ಕಿ ಕೇಂದ್ರ
ಎನ್‌ಎಫ್‌ಎಸ್‌ಎ ಪಡಿತರ ಚೀಟಿಗಳಿಗೆಹಾಗೂ ರಾಜ್ಯ ಸರಕಾರದಿಂದ 53,313.24 ಕ್ವಿಂಟಾಲ್‌ ಬಿಡುಗಡೆ ಯಾಗಿದೆ. ಸಾಗಾಟ ವೆಚ್ಚವನ್ನು ರಾಜ್ಯ ಸರಕಾರದ ಅನುದಾನದಿಂದ ಬಳಸಿಕೊಳ್ಳಲಾಗಿದೆ.

Advertisement

2023ರ ಜುಲೈಯಿಂದ ಅಂತ್ಯೋ ದಯ ಪಡಿತರ ಚೀಟಿಯಲ್ಲಿ 4 ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಹಾಗೂ ಆದ್ಯತಾ ಪಡಿತರ ಚೀಟಿಯ (ಬಿಪಿಎಲ್‌) ಪ್ರತೀ ಸದಸ್ಯನಿಗೆ ನೀಡುವ 5 ಕೆಜಿ ಬದಲಿಗೆ 170 ರೂ.ಗಳನ್ನು ಡಿಬಿಟಿ ಮೂಲಕ ಪಡಿತರ ಚೀಟಿಯ ಮುಖ್ಯಸ್ಥನ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತಿದೆ. ನವೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,39,834 ಪಡಿತರ ಚೀಟಿ ಗಳಿಗೆ 1674.29 ಲಕ್ಷ ರೂ. ಹಾಗೂ ಉಡುಪಿ ಜಿಲ್ಲೆಯಲ್ಲಿ 95,664 ಪಡಿತರ ಚೀಟಿಗಳಿಗೆ 687.47 ಲಕ್ಷ ರೂ. ಪಾವತಿಸಲಾಗಿದೆ.

ಈಡೇರದ ಕುಚ್ಚಲಕ್ಕಿ ಬೇಡಿಕೆ
ಪಡಿತರ ವ್ಯವಸ್ಥೆಯಡಿ ಇಲ್ಲಿ ಸಾಮಾನ್ಯವಾಗಿ ಬಳಸಲಾಗುವ ಕುಚ್ಚಲಕ್ಕಿಯನ್ನು ಪೂರೈಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಕಳೆದ ಹಲವು ವರ್ಷಗಳಿಂದ ಕುಚ್ಚಲಕ್ಕಿ ಪೂರೈಕೆ ಮಾಡುವ ಆಶ್ವಾಸನೆ ದೊರೆಯುತ್ತಿದೆಯಾದರೂ ಇನ್ನೂ ಸಮರ್ಪಕವಾಗಿ ಪೂರೈಕೆ ಆರಂಭವಾಗಿಲ್ಲ.ಸ್ಥಳೀಯವಾಗಿ ಬೆಳೆಯುವ ಕುಚ್ಚಲಕ್ಕಿಯನ್ನು ಸಂಗ್ರಹಿಸಿ ನೀಡಲು ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿಯೂ ಇಲಾಖೆಯಿಂದ ಪತ್ರವ್ಯವಹಾರ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next