ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಜಿ.ಪಂ.ನಿಂದ ಸ್ಥಳೀಯ ಸಂಸ್ಥೆಗಳು, ಎನ್‌ಜಿಒಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳು, ಶಿಕ್ಷಕರು ಹಾಗೂ ಪಾಲಕ, ಪೋಷಕರಿಗೆ ಬೇಕಾದ ನಿರ್ದಿಷ್ಟ ತರಬೇತಿ ಕೊಡಲಾಗುತ್ತಿದೆ.
Advertisement
ಪರೀಕ್ಷೆಯ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ವಾರ್ಷಿಕ ಪರೀಕ್ಷೆಯ ಮಾದರಿಯಲ್ಲೇ ಒಂದು ದಿನ ಅಣಕು ಪರೀಕ್ಷೆ, ವಿದ್ಯಾರ್ಥಿಗಳಿಂದಲೇ ಮೌಲ್ಯಮಾಪನ, ವಿಷಯ ತಜ್ಞರ ಫೋರಂ ರಚಿಸಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಸರಳ ಬೋಧನೆ ಹೀಗೆ ಹಲವು ಕ್ರಮ ಜಾರಿ ಮಾಡಲಾಗುತ್ತಿದೆ.
ಕಳೆದ ವರ್ಷದ “ಸಿ’ ಶ್ರೇಯಯ 16, “ಬಿ’ ಶ್ರೇಣಿಯ 48 ಶಾಲೆಗಳ ಫಲಿತಾಂಶ ಉನ್ನತೀ ಕರಿಸಲು ಕನಿಷ್ಠ ಟಾರ್ಗೆಟ್ ನೀಡಲಾಗಿದೆ. ಈ ಎಲ್ಲ ಶಾಲೆಗಳು ಶೇ. 80ಷ್ಟು ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಕರಿಗೆ ಹೊಣೆಗಾರಿಕೆ ವಹಿಸಲಾಗಿದೆ. ಡಿಡಿಪಿಐ, ಬಿಇಒ ಸಹಿತ ಅಧಿಕಾರಿಗಳು ಈ ಶಾಲೆಗಳಿಗೆ ನಿರಂತರ ಭೇಟಿ ನೀಡಿ, ಕಲಿಕೆ ಪರಿಶೀಲಿಸುವ ಕ್ರಮವೂ ಆಗುತ್ತಿದೆ.
Related Articles
ಬಿಇಒ ನೇತೃತ್ವದಲ್ಲಿ ವಿಷಯ ತಜ್ಞರು ಹಾಗೂ ಮುಖ್ಯಶಿಕ್ಷಕರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳ ತಂಡ ರಚನೆ ಮಾಡಲಾಗಿದೆ. ತಂಡ ಶಾಲೆಗಳಿಗೆ ಭೇಟಿ ನೀಡಿ ಆ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಗಣಿತ, ಸಮಾಜ ವಿಜ್ಞಾನ, ವಿಜ್ಞಾನದ ಕ್ಲಿಷ್ಟ ಅಂಶಗಳನ್ನು ಸರಳ ಬೋಧನೆಯ ಮೂಲಕ ತಿಳಿಸಲು ಎನ್‌ಜಿಒಗಳ ಮೂಲಕ ತರಬೇತಿ ನೀಡಲಾಗುತ್ತದೆ.
Advertisement
ಪಾಸಿಂಗ್ ಪ್ಯಾಕೇಜ್ಪಾಸಾಗಲು ಕಷ್ಟಪಡುವ ಮಕ್ಕಳಿಗೆ 40ರಿಂದ 50 ಅಂಕ ಪಡೆಯಲು ಅನುಕೂಲವಾಗುವಂತೆ ಪಾಸಿಂಗ್ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಆಯಾ ಶಾಲಾ ಶಿಕ್ಷಕರು ಈ ರೀತಿಯ ಮಕ್ಕಳನ್ನು ಗುರುತಿಸಿ, ಪಾಸಿಂಗ್ ಪ್ಯಾಕೇಜ್ ನೀಡಿ, ಇದಕ್ಕೆ ಫೋಕಸ್ ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ. ಕಲಿಕೆ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಗೆ ಪಾಸಿಂಗ್ ಪರ್ಸಂಟೇಜ್ ಗುರಿ ನೀಡಲಾಗಿದೆ. ಹಾಗೆಯೇ ಶಾಲೆಯ ಒಟ್ಟಾರೆ ಫಲಿತಾಂಶ ಸುಧಾರಣೆ ಶಿಕ್ಷಕರಿಗೆ, ಶಾಲೆಗೆ, ಬಿಇಒಗಳಿಗೂ ಗುರಿ ನಿಗದಿ ಮಾಡಲಾಗಿದೆ. ಉಡುಪಿ ಜಿಲ್ಲೆಯ ಉಪಕ್ರಮಗಳು
ಪರೀಕ್ಷೆಗೆ 100ರಿಂದ 110 ದಿನಗಳು ಇರುವಂತೆ ಪ್ರತಿ ಶಾಲೆಯಲ್ಲೂ ಪ್ರತೀ ವಿಷಯದ 100ರಿಂದ 110 ಪ್ರಶ್ನೆಯನ್ನು ಸರಳೀಕರಿಸಿ ಉತ್ತರ ಸಮೇತವಾಗಿ ಹಾಕಲಾಗುತ್ತದೆ. ಕಲಿಕೆಯಲ್ಲಿ ಹಿಂದಿರುವ ಅಥವಾ ಉತ್ತೀರ್ಣರಾಗಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ನಿತ್ಯವೂ ಶಾಲೆಯ ಸಂಪನ್ಮೂಲ ಕೊಠಡಿಗೆ ಭೇಟಿ ನೀಡಿ ಪ್ರತೀ ವಿಷಯದ ಒಂದು ಪ್ರಶ್ನೆ ಮತ್ತು ಉತ್ತರ ಕಲಿಯಬೇಕು. ಈ ಬಗ್ಗೆ ಯಾವುದೇ ಸಂಶಯ ಬಂದಲ್ಲಿ ಸಂಬಂಧಪಟ್ಟ ಶಿಕ್ಷಕರನ್ನು ಕೇಳಿ ಪರಿಹಾರ ಕಂಡುಕೊಳ್ಳಬಹುದಾದ ವ್ಯವಸ್ಥೆ ರೂಪಿಸಲಾಗಿದೆ. ಈಚ್ ಒನ್ ಟೀಚ್ ವನ್
ಎಲ್ಲ ಶಾಲೆಯ ಎಲ್ಲ ತರಗತಿಯಲ್ಲೂ ಕಲಿಕೆಯಲ್ಲಿ ಮುಂದಿರುವ ಹಾಗೂ ಕಲಿಕೆಯ ಸಾಧಾರಣ ಹಂತದಲ್ಲಿರುವ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ ಮತ್ತು ಆ ವಿದ್ಯಾರ್ಥಿಗಳ ಪೂರ್ಣ ಮಾಹಿತಿ ಶಿಕ್ಷಕರಲ್ಲಿ ಇರುತ್ತದೆ. ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಸಾಧಾರಣ ಕಲಿಕೆಯ ವಿದ್ಯಾರ್ಥಿಯೊಂದಿಗೆ ಜೋಡಿಸಿ, ನಿತ್ಯವೂ ನಿರ್ದಿಷ್ಟ ಪಠ್ಯದ ಒಂದೆರೆಡು ಪ್ರಶ್ನೆ ಮತ್ತು ಉತ್ತರವನ್ನು ಸಹಪಾಠಿಗೆ ಕಲಿಸಿಕೊಡುವಂತೆ ಪ್ರೇರೇಪಿಸುವ “ಈಚ್ ಒನ್ ಟೀಚ್ ಒನ್’ ಉಪಕ್ರಮವನ್ನು ಪರಿಚಯಿಸಲಾಗಿದೆ. ಮಕ್ಕಳ ದತ್ತು
ಎಸೆಸೆಲ್ಸಿಯ ಪ್ರತೀ ವಿದ್ಯಾರ್ಥಿಯ ಮೇಲೂ ವಿಶೇಷ ನಿಗಾ ವಹಿಸಲು ಶಿಕ್ಷಕರಿಗೆ ಜವಾಬ್ದಾರಿ ಹಂಚಲಾಗಿದೆ. ಮಕ್ಕಳ ದತ್ತು ಪರಿಕಲ್ಪನೆಯಲ್ಲಿ ಎಸೆಸೆಲ್ಸಿ ಮಕ್ಕಳನ್ನು ಅಲ್ಲಿನ ಶಿಕ್ಷಕರ ಸಂಖ್ಯೆಗೆ ಅನುಗುಣವಾಗಿ ವಿಭಾಗಿಸಿ ಅವರ ಕಲಿಕೆ ಮತ್ತು ಅದರ ನಿರ್ವಹಣೆ ಮೇಲ್ವಿಚಾರಣೆಗೆ ಸೂಚಿಸಲಾಗಿದೆ. ಅಷ್ಟು ಮಾತ್ರವಲ್ಲದೇ ಆ ವಿದ್ಯಾರ್ಥಿ ಮನೆಗೆ ಈ ಶಿಕ್ಷಕರು ಭೇಟಿ ನೀಡಿ ಮನೆಯಲ್ಲಿ ಓದಿಗೆ ಪೂರಕ ವಾತಾವರಣ ಇಲ್ಲದೇ ಇದ್ದಲ್ಲಿ ಅದನ್ನು ಸೃಷ್ಟಿಸುವ ನಿಟ್ಟಿನಲ್ಲಿ ಮಕ್ಕಳ ಪಾಲಕ, ಪೋಷಕರು, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ಮಾಡಬೇಕು ಎಂಬ ನಿರ್ದೇಶನ ನೀಡಲಾಗಿದೆ ಮತ್ತು ಹಲವು ಶಾಲೆಯಲ್ಲಿ ಇದು ಜಾರಿಯಾಗಿದೆ. ಎಸೆಸೆಲ್ಸಿ ಫಲಿತಾಂಶ ಉನ್ನತೀಕರಿಸುವ ಸಂಬಂಧ ಈಗಾಗಲೇ ವಿದ್ಯಾರ್ಥಿಗಳು, ಶಾಲೆ ಹಾಗೂ ಬಿಇಒ ಹಂತದಲ್ಲಿ ಭಿನ್ನಭಿನ್ನ ಕಾರ್ಯಕ್ರಮ ರೂಪಿಸಿ, ಅನುಷ್ಠಾನ ಮಾಡಲಾಗುತ್ತಿದೆ. ಕಳೆದ ವರ್ಷದ ಫಲಿತಾಂಶ ವಿಶ್ಲೇಷಿಸಿ ಹಲವು ಹೊಸ ಪ್ರಯತ್ನ ನಡೆಸುತ್ತಿದ್ದೇವೆ.
-ದಯಾನಂದ ನಾಯಕ್, ಗಣಪತಿ, ಡಿಡಿಪಿಐಗಳು, ದ.ಕ., ಉಡುಪಿ ರಾಜು ಖಾರ್ವಿ ಕೊಡೇರಿ