Advertisement

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

12:11 AM Jun 04, 2024 | Team Udayavani |

ಮಂಗಳೂರು/ಉಡುಪಿ: ಮುಂಗಾರು ಕರಾವಳಿ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಸೋಮವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ.

Advertisement

ರವಿವಾರವೇ ಕರಾವಳಿಗೆ ಮುಂಗಾರಿನ ಪ್ರವೇಶವಾಗಿದ್ದರೂ ನಿರೀಕ್ಷಿತ ಮಳೆಯನ್ನು ತಾರದ ಹಿನ್ನೆಲೆಯಲ್ಲಿ ಮುಂಗಾರು ಕ್ಷೀಣವಾಗಿಯೇ ಸಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಬಳಿಕ ದಟ್ಟ ಮೋಡ ಕವಿದು ಮಳೆ ಸುರಿಯಲು ಆರಂಭವಾಗಿದೆ.

ಹಲವೆಡೆ ಹಾನಿ ಸಂಭವಿಸಿದೆ. ಪುತ್ತೂರಿನಲ್ಲಿ ಕೃತಕ ನೆರೆಯಿಂದಾಗಿ ಚಿನ್ನದ ಅಂಗಡಿಗೆ ನೀರು ನುಗ್ಗಿದೆ. ದರ್ಬೆ ಬಳಿ ಚರಂಡಿ ಬ್ಲಾಕ್‌ ಆಗಿ ಮಳೆ ನೀರು ರಸ್ತೆಗೆ ನುಗ್ಗಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಬಿಳಿನೆಲೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ, ಎಲಿಮಲೆ ಶಾಲಾ ಬಳಿಯಲ್ಲಿ ಮಣ್ಣು ಕುಸಿದು ಮನೆಯೊಂದಕ್ಕೆ ಹಾನಿ ಭೀತಿ ಎದುರಾಗಿದೆ.

ಮಂಗಳೂರು ನಗರದಲ್ಲಿ ಮಧ್ಯಾಹ್ನ ಬಳಿಕ ಸಾಮಾನ್ಯ ಮಳೆಯಾಗಿದೆ. ಸುಳ್ಯ ಭಾಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಪುತ್ತೂರಿನಲ್ಲಿಯೂ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಬಂಟ್ವಾಳದಲ್ಲೂ ಉತ್ತಮ ಮಳೆ ಸುರಿದಿದೆ.

ಸುಳ್ಯ: ಗುಡುಗು ಸಹಿತ ಮಳೆ
ಸುಳ್ಯ ತಾಲೂಕಿನಲ್ಲಿ ಸೋಮವಾರ ಅಪರಾಹ್ನ ಗುಡುಗು ಸಹಿತ ಭಾರೀ ಮನೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮಳೆಯಾಗಿದೆ. ಕೊಲ್ಲಮೊಗ್ರು, ಹರಿಹರ ಭಾಗದಲ್ಲೂ ಧಾರಕಾರ ಮಳೆಯಾಗಿದ್ದು ಅಲ್ಲಿನ ಹೊಳೆಯಲ್ಲಿ ನೀರು ಹರಿದು ಬಂದಿದೆ. ಸುಳ್ಯ, ಅರಂತೋಡು, ಜಾಲೂÕರು, ಮಂಡೆಕೋಲು, ಬೆಳ್ಳಾರೆ, ಪಂಜ, ಕೊಲ್ಲಮೊಗ್ರು, ಸುಬ್ರಹ್ಮಣ್ಯ ಮತ್ತಿತರ ಕಡೆಗಳಲ್ಲಿ ಮಳೆಯಾಗಿದೆ.

Advertisement

ಉಡುಪಿ: ಉತ್ತಮ ಮಳೆ
ಉಡುಪಿ ಜಿಲ್ಲೆಯಲ್ಲಿ ರವಿವಾರ ತಡರಾತ್ರಿ, ಸೋಮವಾರ ಬಿಟ್ಟು ಬಿಟ್ಟು ಮಳೆ ಸುರಿದ್ದು, ಹೆಬ್ರಿ, ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಮಣಿಪಾಲ, ಮಲ್ಪೆ, ಉಡುಪಿ ಪರಿಸರದಲ್ಲಿ ಸೋಮವಾರ ಇಡೀ ದಿನ ಬಿಸಿಲು-ಮೋಡ ಕವಿದ ವಾತವಾರಣದ ನಡುವೆ ಕೆಲಕಾಲ ಗುಡುಗು ಸಹಿತ ಮಳೆಯಾಗಿದೆ.

ಮುನ್ನೆಚ್ಚರಿಕೆ
ಕರಾವಳಿಯಲ್ಲಿ ಜೂ. 3ರಿಂದ 8ರ ವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜನೆಗೊಂಡ ನೋಡಲ್‌ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ತುರ್ತು ಸೇವೆಗೆ 1077, 0820-2574802ನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾಧಿ ಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

ಇಂದು ಎಲ್ಲೋ ಅಲರ್ಟ್‌
ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಕರಾವಳಿಗೆ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಕರಾವಳಿಯ ವಿವಿಧೆಡೆ ಗುಡುಗು ಸಹಿತ ಸಾಧಾರಣದಿಂದ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪುತ್ತೂರು: ಧಾರಾಕಾರ ಮಳೆ, ಸಿಡಿಲ ಅಬ್ಬರ
ಪುತ್ತೂರು: ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಗುಡುಗು-ಸಿಡಿಲು ಸಹಿತ ಒಂದು ತಾಸು ಭಾರೀ ಮಳೆಯಾಗಿದ್ದು ನಗರದಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ರಸ್ತೆ ಸಂಚಾರಕ್ಕೆ ತೊಡಕು ಉಂಟಾಯಿತು.

ನಗರದ ದರ್ಬೆಯಲ್ಲಿ ಕಿರಿದಾದ ರಾಜಕಾಲುವೆಯಿಂದ ಉಕ್ಕಿದ ಮಳೆ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತಡೆ ಉಂಟಾಯಿತು. ನಿವೃತ್ತ ಶಿಕ್ಷಕಿಯೋರ್ವರ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರಲ್ಲಿ ಮುಳುಗಿ ಹಾನಿ ಸಂಭವಿಸಿತು. ಇಲ್ಲಿ ರಾಜಕಾಲುವೆ ಕಿರಿದಾಗಿದ್ದು ಕಳೆದ ಕೆಲ ವರ್ಷಗಳಿಂದ ಕೃತಕ ನೆರೆ ಉಂಟಾಗುತ್ತಿದ್ದರೂ ನಗರ ಆಡಳಿತ ಸ್ಪಂದಿಸದ ಕಾರಣ ಸಮಸ್ಯೆ ಉಂಟಾಗಿದೆ.

ಕೋರ್ಟ್‌ ರಸ್ತೆಯ ವಿಜಿತ್‌ ಜುವೆಲ್ಸ್‌ಗೆ ಮತ್ತು ಸಮೀಪದ ಝರಾ ಫ್ಯಾನ್ಸಿ ಅಂಗಡಿಗೂ ನೀರು ನುಗ್ಗಿ ತೊಂದರೆ ಉಂಟಾಗಿದೆ. ಕೆಲವು ದಿನಗಳ ಹಿಂದೆ ಕೋರ್ಟ್‌ ರಸ್ತೆಯ ವಿವಿಧ ಭಾಗಗಳಲ್ಲಿ ಚರಂಡಿ ಅವ್ಯವಸ್ಥೆಯಿಂದ ಮಳೆ ನೀರು ಕಟ್ಟಡಗಳಿಗೆ ನುಗ್ಗಿತ್ತು. ಕೋರ್ಟ್‌ ರಸ್ತೆಯಲ್ಲಿ ಕಾಂಪೌಂಡ್‌ ಗೋಡೆ ಕುಸಿದಿದೆ. ದಾರಂದಕುಕ್ಕು-ಕಂಜೂರು-ನೆಡ್ಯರಗುಡ್ಡೆ-ಕುಂಟ್ಯಾನ್‌ಬೈಲ್‌ ರಸ್ತೆಯಲ್ಲಿ ಚರಂಡಿ ಅತಿಕ್ರಮಣದಿಂದ ಇಡೀ ಜಲಾವೃತಗೊಂಡಿತ್ತು.

ಸಿಡಿಲಿಗೆ ನಲುಗಿದ ನಗರ! ಸಂಜೆ ಸುಮಾರು 4.30ರ ಹೊತ್ತಿಗೆ ನಗರದಲ್ಲಿ ಮಳೆ ಪ್ರಾರಂಭಗೊಂಡಿತ್ತು. ಒಂದು ತಾಸು ಧಾರಾಕಾರ ಸುರಿದಿದೆ. ನಾಲ್ಕೈದು ಸಲಸಿಡಿಲಿನ ಆರ್ಭಟಕ್ಕೆ ನಗರ ಬೆಚ್ಚಿ ಬಿದ್ದಿತ್ತು. ಹಲವಾರು ಮನೆ, ವಾಣಿಜ್ಯ ಕಟ್ಟಡಗಳಲ್ಲಿ ಸಿಡಿಲಿನ ಆಘಾತದಿಂದ ಎಲೆಕ್ಟ್ರಿಕಲ್‌ ಉಪಕರಣಗಳಿಗೆ ಹಾನಿ ಉಂಟಾಗಿದೆ.

ಎಲಿಮಲೆ: ಮತ್ತೆ ಕುಸಿದ ಪ್ರೌಢಶಾಲೆಯ
ತಡೆಗೋಡೆ; ಅಡಿಕೆ ಗಿಡ, ಮನೆಗೆ ಹಾನಿ
ಗುತ್ತಿಗಾರು: ಎಲಿಮಲೆ ಸರಕಾರಿ ಪ್ರೌಢಶಾಲೆಯ ಮೈದಾನಕ್ಕೆ ಒಂದು ಬದಿ ಕಟ್ಟಿದ್ದ ತಡೆಗೋಡೆ ಮತ್ತೆ ಕುಸಿದಿದೆ. ಇದರಿಂದಾಗಿ ಹತ್ತಿರದ ಮನೆ ಹಾಗೂ ಅಡಿಕೆ ತೋಟಕ್ಕೆ ಹಾನಿಯಾಗಿದೆ.

ಎಲಿಮಲೆ ಸರಕಾರಿ ಪ್ರೌಢಶಾಲೆಯ ಮೈದಾನದ ಸುತ್ತ ತಡೆಗೋಡೆ ಮಾಡಲಾ ಗಿದ್ದು, ಜಗದೀಶ ಅಂಬೆಕಲ್ಲು ಅವರ ಮನೆಯ ಭಾಗದ ತಡೆಗೋಡೆ ಕೆಲವು ದಿನಗಳ ಹಿಂದೆ ಕುಸಿದಿತ್ತು. ಪರಿಣಾಮ ವಿದ್ಯುತ್‌ ಕಂಬ ಧರೆಗುರುಳಿತ್ತು ಹಾಗೂ ತಡೆಗೋಡೆ ಮತ್ತು ಜಗದೀಶ ಅಂಬೆಕಲ್ಲು ಅವರ ಮನೆಯ ಗೋಡೆಯ ಮಧ್ಯೆ ಸಾಕುತ್ತಿದ್ದ ಸುಮಾರು 20 ಊರಕೋಳಿಗಳು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದವು. ಇದೀಗ ಅದೇ ತಡೆಗೋಡೆ ಮತ್ತೆ ಕುಸಿದಿದ್ದು, ಜಗದೀಶ ಅಂಬೆಕಲ್ಲು ಅವರ ಮನೆಯ ಪಿಲ್ಲರ್‌ ಬಿರುಕು ಬಿಟ್ಟಿದೆ. ಈ ಹಿಂದೆ ಕುಸಿತಗೊಂಡಿದ್ದ ಮಣ್ಣು ತೆಗೆಯಲಾಗಿತ್ತು. ಮತ್ತೆ ಕುಸಿತಗೊಂಡ ಪರಿಣಾಮ ನಾಟಿ ಮಾಡಲು ತಯಾರಿಸಿದ್ದ ಸುಮಾರು 400 ಅಡಿಕೆ ಗಿಡಗಳು ಮಣ್ಣಿನಡಿಗೆ ಬಿದ್ದಿವೆ ಎಂದು ಜಗದೀಶ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next