ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಜೆಪಿ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.
ಉಭಯ ನಾಯಕರು ಸುಮಾರು ಒಂದು ಗಂಟೆ ಕಾಲ ಸಮಾಲೋಚನೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಬದ್ಧ ಎದುರಾಳಿಗಳು ಎಂದೇ ಬಿಂಬಿತವಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಎಚ್. ಡಿ.ಕುಮಾರಸ್ವಾಮಿ ಭೇಟಿ ರಾಜಕೀಯ ವಲಯದಲ್ಲಿ ಒಂದಷ್ಟು ಚರ್ಚೆಗೂ ಗ್ರಾಸವಾಗಿದೆ. ಆದರೆ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಚಿಸಲಾಗಿರುವ ವಿದ್ಯುತ್ ಖರೀದಿ ಹಗರಣ ಸಂಬಂಧ ಸದನ ಸಮಿತಿಯ ವರದಿ ಅ.30ರಂದು ಸಲ್ಲಿಸಬೇಕಿದ್ದು, ಆ ಸಮಿತಿ ಸದಸ್ಯರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಸಹಿ ಪಡೆಯಲು
ಶಿವಕುಮಾರ್ ಬಂದಿದ್ದರು. ಅದೇ ಸಂದರ್ಭದಲ್ಲಿ ಆರೋಗ್ಯ ವಿಚಾರಿಸಿದರು.
ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದ ಸದನ ಸಮಿತಿ ಸದಸ್ಯ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದರು. ಅದು ಅಂಗೀಕಾರ ವಾಗದ ಕಾರಣ ಸದಸ್ಯರಾಗಿ ಮುಂದುವರಿದಿದ್ದರು. ಹೀಗಾಗಿ, ವರದಿ ಸಲ್ಲಿಸಲು ಸಮಿತಿ ಸದಸ್ಯರ ಸಹಿ ಅಗತ್ಯವಾಗಿದೆ. ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಕುಮಾರಸ್ವಾಮಿಯವರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಹೇಳಿಕೆ ನೀಡಿರುವ ಕುಮಾರಸ್ವಾಮಿ, ವಿದ್ಯುತ್ ಖರೀದಿ ಅಕ್ರಮಗಳನ್ನು ದಾಖಲೆ ಸಮೇತ ಸಂಗ್ರಹಿಸಿ ಎರಡು ತಿಂಗಳ ಹಿಂದೆಯೇ ಸಮಿತಿಗೆ ಸಲ್ಲಿಸಿದ್ದೆ. ಇದರಿಂದ ಸರ್ಕಾ ರಕ್ಕೆ ಆದ ಸಾವಿರಾರು ಕೋಟಿ ರೂ. ನಷ್ಟದ ಬಗ್ಗೆಯೂ ಅಂಕಿ-ಅಂಶ ನೀಡಿದ್ದೆ. ಈ ಅಂಶಗಳನ್ನೂ ಸೇರಿಸಿ ಅಧಿಕಾರಿಗಳು ಅಂತಿಮ ವರದಿ ಸಿದ್ಧಪಡಿಸಿದ್ದಾರೆಂದು ಶಿವಕುಮಾರ್ ಹೇಳಿದರು.
ಅಂತಿಮ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು ಎಂದು ಹೇಳಿದರು. ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿರುವುದು, ಜಾರ್ಜ್ ರಾಜೀನಾಮೆ ಕೊಡಬೇಕಿಲ್ಲ ಎಂದು ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿರುವುದು. ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಕುಮಾರಸ್ವಾಮಿ ಅವರನ್ನು ಸಹಿ ಪಡೆಯುವ ನೆಪದಲ್ಲಿ ಭೇಟಿಯಾಗಿರುವುದು
ರಾಜಕೀಯ ವಲಯಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ನೀವು ರಾಜಕಾರಣದಲ್ಲಿ ಹೋಗುತ್ತಿರುವ ಸ್ಪೀಡು ಜಾಸ್ತಿ ಇದೆ. ಆರೋಗ್ಯದ ಬಗ್ಗೆ ಗಮನ ನೀಡಿ ಎಂದು ಡಿ.ಕೆ.ಶಿವಕುಮಾರ್ ನನಗೆ ಸಲಹೆ ನೀಡಿದ್ದಾರೆ. ವಿದ್ಯುತ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ಕರಡು ತೋರಿಸಿ ಸಹಿ ಪಡೆದಿದ್ದಾರೆ. ಇದನ್ನು ಹೊರತುಪಡಿಸಿ ಯಾವುದೇ ರಾಜಕೀಯ ವಿಷಯವನ್ನು ನಾನು ಮತ್ತು ಡಿ.ಕೆ. ಶಿವಕುಮಾರ್ ಚರ್ಚೆ ಮಾಡಲಿಲ್ಲ.
●ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ