Advertisement

ಕೆಪಿಸಿಸಿ ಪಟ್ಟಿಗೆ ಸಿಗದ ಮುಕ್ತಿ: ಸಿದ್ದು-ಡಿಕೆಶಿ ಪಟ್ಟು-ಹೈಕಮಾಂಡ್‌ ಗೂ ಇಕ್ಕಟ್ಟು

08:25 AM Aug 24, 2021 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಗಿ ಪಟ್ಟು ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ “ಗಜಪ್ರಸವ’ದಂತಾಗಿದೆ.

Advertisement

ಕೆಪಿಸಿಸಿ ಪದಾಧಿಕಾರಿಗಳಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚು ಆದ್ಯತೆ ಸಿಗಬೇಕೆಂಬ ಇಬ್ಬರೂ ನಾಯಕರ ಒತ್ತಡ ಹೈಕಮಾಂಡ್‌ಗೂ ಇಕ್ಕಟ್ಟು ತಂದಿಟ್ಟಿದ್ದು, ಮಹೂರ್ತವೇ ಕೂಡಿಬರದಂತಾಗಿದೆ.

ಕಾಂಗ್ರೆಸ್‌ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸಹ ಕೈ ಚೆಲ್ಲಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ವಿರೋಧ ಕಟ್ಟಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ, ವರ್ಷ ಕಳೆದರೂ ಪಟ್ಟಿಗೆ ಮುಕ್ತಿ ಸಿಗದಂತಾಗಿದೆ. ಉಪ ಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹೀಗೆ ಪ್ರತಿ ಚುನಾವಣೆಯಲ್ಲೂ ದುಡಿದರೂ ಆಕಾಂಕ್ಷಿಗಳ ಹುದ್ದೆಯ ಕನಸು ಈಡೇರದಂತಾಗಿದ್ದು ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರದೇ ದರ್ಬಾರ್‌ ಎಂಬಂತಾಗಿದೆ.

ಇದನ್ನೂ ಓದಿ:ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಸ್ಪರ್ಧೆ:ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಖರ್ಗೆ ಪ್ರತಿಪಾದನೆ

ಮತ್ತೂಂದೆಡೆ ಹಿಂದುಳಿದ, ಅಲ್ಪಸಂಖ್ಯಾತರ, ಮಹಿಳಾ, ಎಸ್‌ಸಿ-ಎಸ್‌ಟಿ ಘಟಕಗಳ ಅಧ್ಯಕ್ಷರ ಹುದ್ದೆಗೂ ಹೊಸಬರ ಆಯ್ಕೆಗೆ ನಿರ್ಧಾರ ಮಾಡಿರುವುದರಿಂದ ಹಾಲಿ ಇರುವ ಘಟಕಗಳು ನಿಷ್ಕ್ರಿಯವಾಗಿದ್ದು ಅತ್ತ ಪದಾಧಿಕಾರಿಗಳೂ ಇಲ್ಲ ಇತ್ತ ಘಟಕಗಳು ಸಕ್ರಿಯವಾಗಿಲ್ಲ ಎಂದು ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ.

Advertisement

ಜಿಲ್ಲಾ ಮಟ್ಟದಲ್ಲೂ ಹತ್ತು ಘಟಕಗಳಿಗೆ ಹೊಸ ಅಧ್ಯಕ್ಷರ ನೇಮಕಕ್ಕೆ ಮುಂದಾಗಿರುವುದರಿಂದ ಅಲ್ಲಿನ ತಾಲೂಕು ಮತ್ತು ಬ್ಲಾಕ್‌ ಘಟಕಗಳು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ಇದು ಸಂಘಟನೆ ಮೇಲೂ ಪರಿಣಾಮ ಬೀರಿದೆ ಎಂದು ಹೇಳುತ್ತಾರೆ.

ಕಗ್ಗಂಟು: ಕೆಪಿಸಿಸಿ ಪದಾಧಿಕಾರಿಗಳ ನೇಮಕ ಸಂಬಂಧ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರತ್ಯೇಕ ಪಟ್ಟಿ ನೀಡಿದ್ದು ಇದರ ಜತೆಗೆ ಹಿರಿಯ ನಾಯಕರಾದ ಬಿ.ಕೆ.ಹರಿಪ್ರಸಾದ್‌, ಕೆ.ಎಚ್‌.ಮುನಿಯಪ್ಪ, ರೆಹಮಾನ್‌ ಖಾನ್‌, ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ತಮ್ಮ ಬೆಂಬಲಿಗರಿಗೆ ಮಣೆ ಹಾಕುವಂತೆ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮೊರೆ ಹೋಗಿದ್ದಾರೆ. ಹೀಗಾಗಿ, ಸರ್ವ ಸಮ್ಮತ ಆಯ್ಕೆ ಕಗ್ಗಂಟಾಗಿದೆ ಎಂದು ಹೇಳಲಾಗಿದೆ.

ಮಾಜಿ ಸಚಿವರು, ಶಾಸಕರನ್ನು ಆದಷ್ಟು ಪಟ್ಟಿಯಿಂದ ಹೊರಗಿಟ್ಟು ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವಕಾಶ ಕೊಡಬೇಕೆಡಂಬ ಬೇಡಿಕೆ ಹೆಚ್ಚಾಗಿದ್ದು, ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಕೊರೊನಾ ಸಂದರ್ಭದಲ್ಲಿ ಜನರ ಪರವಾಗಿ ಕೆಲಸ ಮಾಡುವ ಟಾಸ್ಕ್ ನೀಡಿ ಯಾರ್ಯಾರು ಕೆಲಸ ಮಾಡಿದ್ದಾರೆ. ಲೆಟರ್‌ಹೆಡ್‌ ಪದಾಧಿಕಾರಿಗಳು ಯಾರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕೆಲಸ ಮಾಡಿವರನ್ನು ಮಾತ್ರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಪಟ್ಟಿ ಕಳುಹಿಸಿದ್ದು 100 ಮಂದಿ ಆ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಬಿ.ಎಲ್.ಶಂಕರ್‌. ಪ್ರೊ.ಬಿ.ಕೆ.ಚಂದ್ರಶೇಖರ್, ಮೋಟಮ್ಮ, ರಾಣಿ ಸತೀಶ್‌, ಎಲ್‌. ಹನುಮಂತಯ್ಯ, ವಿ.ಆರ್.ಸುದರ್ಶನ್‌, ಪ್ರಧಾನ ಕಾರ್ಯದರ್ಶಿಗಳಾಗಿದ್ದ ಗೋವಿಂದ ರಾಜು, ಮಲ್ಲಾಜಮ್ಮ ಸೇರಿ ಹಿರಿಯರ ಪೈಕಿ ಹಲವರನ್ನು ಉಳಿಸಿಕೊಂಡು ವಿ.ಎಸ್‌. ಉಗ್ರಪ್ಪ, ಎಚ್‌.ಎಂ.ರೇವಣ್ಣ ಸೇರಿ ಹಿರಿಯರಿಗೆ ಹೊಣೆಗಾರಿಕೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮಾಸಾಂತ್ಯದ ನಿರೀಕ್ಷೆ: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರ ಶಿಫಾರಸು ಪರಿಗಣಿಸಿ 40-40-20 ಫಾರ್ಮುಲಾ ದಡಿ ಪಟ್ಟಿ ಸಿದ್ಧಗೊಳಿಸಲಾಗಿದೆ. ಜಿಲ್ಲಾ ಹಾಗೂ ಪ್ರಾದೇಶಿಕವಾರು, ಸಮುದಾಯವಾರು ಪ್ರಾತಿನಿಧ್ಯ ನೀಡುವ ಕಸರತ್ತು ನಡೆದಿದೆ. ಅಂತಿಮವಾಗಿ ಇಬ್ಬರ ಗಮನಕ್ಕೂ ತಂದು ಅಧಿಕೃತವಾಗಿ ಬಿಡುಗಡೆ ಮಾಡಲು ಹೈಕಮಾಂಡ್‌ ನಿರ್ಧರಿಸಿದೆ. ಮಾಸಾಂತ್ಯದೊಳಗೆ ಪಟ್ಟಿ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.

 ಎಸ್‌. ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next