ಬೆಂಗಳೂರು: ಡಿಕೆಶಿ ಸಹೋದರರ ವಿರುದ್ಧ ಕ್ರಮಕ್ಕೆ ಬಿಎಸ್ ಯಡಿಯೂರಪ್ಪ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು ಎಂದು ಡಿಕೆ ಸುರೇಶ್ ಶನಿವಾರ ಬಾಂಬ್ ಸಿಡಿಸಿದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ದಿಢೀರ್ ಬೆಳವಣಿಗೆಗಳು ನಡೆಯತೊಡಗಿದೆ. ಏತನ್ಮಧ್ಯೆ ಸೋಮವಾರ ಸಂಬಂಧಪಟ್ಟ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಊಹಾಪೋಹ ದಟ್ಟವಾಗಿ ಹಬ್ಬಿದೆ.
ಡಿಕೆ ಶಿವಕುಮಾರ್ ಅವರು ವಿರುದ್ಧ ಜಾರಿ ನಿರ್ದೇಶನಾಲಯ ಎಫ್ ಐಆರ್ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ನಮ್ಮನ್ನು ಬಂಧಿಸಿದರೂ ನಮಗೆ ಭಯವಿಲ್ಲ ಎಂದು ಡಿಕೆ ಸುರೇಶ್ ಕೂಡಾ ತಿರುಗೇಟು ನೀಡಿದ್ದಾರೆ.
ಅಲ್ಲದೇ ಇನ್ನು ಎರಡು ದಿನ ಕಾದು ನೋಡಿ, ಸರ್ಕಾರ ಬೀಳಬಹುದು ಎಂಬುದಾಗಿ ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಹೇಳಿರುವ ಮಾತುಗಳು ರಾಜಕೀಯ ವಲಯದಲ್ಲಿ ಹಲವಾರು ವಿಶ್ಲೇಷಣೆಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿಯವರಿಗೆ ತಾಳ್ಮೆ ಇರಲಿ, ನನ್ನೇಕೆ ಬಂಧಿಸುತ್ತಾರೆ ಎಂಬುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಾನು ಪತ್ರವನ್ನು ಬರೆದಿಲ್ಲ ಅದು ನಕಲಿ ಪತ್ರ ಎಂದು ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಗೆ ತೆರಳಿದ್ದ ಬಿಎಸ್ ವೈ ಅವರು ದಿಢೀರ್ ಆಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸಿಎಂ ಆಗಲಿಕ್ಕೆ ತುರ್ತಾಗಿ ಆಗಮಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನು ಹೆದರಿಸಿ ಬಿಜೆಪಿಗೆ ಸೆಳೆಯುವ ಯತ್ನ ಮಾಡಿದೆ ಎಂದು ಡಿಕೆ ಸುರೇಶ್ ಆರೋಪಿಸಿದ್ದಾರೆ. ಈ ಐಟಿ, ಜಾರಿ ನಿರ್ದೇಶನಾಲಯದ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್, ಜೆಡಿಎಸ್ ಗಂಭೀರವಾಗಿ ದೂರಿದೆ. ಈ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ಮುಂದುವರಿದಿದೆ.