ಬೆಂಗಳೂರು: ನನಗೆ ಯಾವುದೇ ಅಧಿಕಾರವೂ ಬೇಡ. ಪಕ್ಷದ ವಿಚಾರವಾಗಿ ಹೈಕಮಾಂಡ್ ಯಾವುದೇ ನಿರ್ಧಾರ ಬೇಕಾದರು ತೆಗೆದುಕೊಳ್ಳಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷದ ಪ್ರಮುಖ ಹುದ್ದೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
‘ನನಗೆ ಯಾವುದಕ್ಕೂ ಆತುರ ಇಲ್ಲ. ಯಾರಿಗೆ ಅಧಿಕಾರ ಬೇಕು, ಯಾರಿಗೆ ಕಾರು ಬೇಕೋ, ಮನೆ ಬೇಕೋ ತೆಗದುಕೊಳ್ಳಲಿ. ನನಗೆ ಪರ್ಮನೆಂಟ್ ಮನೆ ಇದೆ. ಸಧ್ಯಕ್ಕೆ ಸಾಕು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಕೂಡ ಮಾತನಾಡಿ, ನನಗೆ ಏನೂ ಗೊತ್ತಿಲ್ಲ. ನಾಳೆ ರಾಜ್ಯಕ್ಕೆ ನಮ್ಮ ಪಕ್ಷದ ನಾಯಕರು ಬರುತ್ತಿದ್ದಾರೆ. ನೋಡೋಣ’ ಎಂದರು.
ಇನ್ನು ಸಿದ್ದರಾಮಯ್ಯ ಹಾಗೂ ದೇವೇಗೌಡ ಕುಟುಂಬದ ನಡುವಣ ಟೀಕೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡರು ಏನೇನು ಮಾತನಾಡಿದ್ದಾರೆ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ನಾನು ಪತ್ರಿಕೆ ನೋಡಿಲ್ಲ. ಹೀಗಾಗಿ ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಒಬ್ಬ ಸಿಎಂ ಕೆಳಗೆ 14 ತಿಂಗಳು ಮಾಡಿದ್ದ ಕೆಲಸಕ್ಕೆ ಬದ್ಧನಾಗಿದ್ದೇನೆ ಎಂದರು.
ಬಿಜೆಪಿ ಮಾಜಿ ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಡಿ.ಕೆ.ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು. ‘ಜೇಟ್ಲಿ ಅವರು ಮಾದರಿ ರಾಜಕಾರಣಿ. ನಾನೂ ಎಷ್ಟೋ ಬಾರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಕರ್ನಾಟಕ ರಾಜಕಾರಣದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅವರ ಜೀವನ ಇಷ್ಟು ಬೇಗ ಅಂತ್ಯ ಕಾಣಬಾರಡಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.