ಬೆಂಗಳೂರು: ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಆದರೆ ನಮ್ಮವರನ್ನು ಬಂಧಿಸಿದ್ದಾರೆ. ನಮ್ಮ ನಾಯಕರು ಯಾವ ತಪ್ಪು ಮಾಡಿಲ್ಲ. ಬಿಜೆಪಿಯರು ತುರ್ತು ಪರಿಸ್ಥಿತಿಗಿಂತ ದೊಡ್ಡ ವಿಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಇಡಿಗೆ ಕರೆದುಕೊಂಡು ಹೋಗಿದ್ದಾಗ ನ್ಯಾಷನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್ ವರೆಗೂ ರಾಲಿ ಮಾಡಿದ್ದರು. ಯಾರಾದರೂ ಗಲಾಟೆ ಮಾಡಿದ್ದರಾ? ಅವರು ನೋವು, ದುಃಖ ದುಮ್ಮಾನ ಹೇಳಿಕೊಂಡರು. ದೇಶದ ಉದ್ದಗಲಕ್ಕೂ ನಮ್ಮ ನಾಯಕರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಆದರೆ ಪ್ರತಿಭಟನೆ ಮಾಡಬಾರದು ಎಂದರೆ ಹೇಗೆ ಎಂದರು.
ಇದನ್ನೂ ಓದಿ:ನಮ್ಮ ನೀರಿಗೆ ಹುನ್ನಾರ ಮಾಡುತ್ತಿದ್ದಾರೆ: ಸ್ಟಾಲಿನ್ ಪತ್ರಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು
ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಸಂವಿಧಾನದಲ್ಲಿರುವ ಹಕ್ಕು. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಮನೆಯಿಂದ ಹೊರ ಬರುವ ಮೊದಲೇ ಬಂಧಿಸಲು ಹೋಗಿದ್ದರು. ಪ್ರತಿಭಟನೆಗೆ ಹೋಗಲೇ ಬಾರದು ಎಂದರೇ ಹೇಗೆ? ಪ್ರತಿಭಟನೆಗೆ ಹೋಗದಂತೆ ಎಲ್ಲಾ ಗಾಡಿಗಳನ್ನು ತಡೆಹಿಡಿದ್ದರು. ಬೆಳಿಗ್ಗೆ ಏಐಸಿಸಿ ಕಚೇರಿಗೆ ಹೋದ ಹೆಚ್.ಕೆ.ಪಾಟೀಲ್, ಡಿಕೆ ಸುರೇಶ್, ದಿನೇಶ್ ಗುಂಡೂರಾವ್ ರನ್ನು ಬಂಧನ ಮಾಡಿದ್ದಾರೆ. ಇದು ಅನ್ಯಾಯ. ಅವರು ಮಾಡಬಾರದ್ದು ಏನು ಮಾಡಿದ್ದಾರೆ ಎಂದರು.
ನಮ್ಮ ಕಚೇರಿಗೆ ಹೋದರೆ ಇವರು ಬಂಧನ ಮಾಡುತ್ತಾರಾದರೆ ಎಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.