ಮಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪನವರು ಮುಖ್ಯಮಂತ್ರಿಗಳ ವಿರುದ್ಧ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪನವರನ್ನು ಯಡಿಯೂರಪ್ಪ ಇಂದು ಸಾಯಂಕಾಲದ ಒಳಗೆ ಸಚಿವ ಸ್ಥಾನದಿಂದ ಉಚ್ಛಾಟಿಸಲಿ ಅಥವಾ ತಾವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಕೇರಳ ಚುನಾವಣಾ ಪ್ರಚಾರಕ್ಕೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಈಶ್ವರಪ್ಪ ಬರೆದಿರುವುದು ಕೇವಲ ಪತ್ರ ಅಲ್ಲ, ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸಿದ್ದಾರೆ. ಈಶ್ವರಪ್ಪ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರಿಗೆ ಪತ್ರ ಬರೆದು ಸಿಎಂ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದ್ದು, ಸಚಿವರಿಗೆ ಸಿಎಂ ಮೇಲೆ ವಿಶ್ವಾಸ ಇಲ್ಲದಂತಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ: ಸಚಿವ ಸೋಮಣ್ಣ
ಈವರೆಗೆ ಯಾವೊಬ್ಬ ಸಚಿವರು ಸಿಎಂ ಆಡಳಿತದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ, ಈಶ್ವರಪ್ಪ ಈಗ ಮಾಡಿದ್ದಾರೆ. ಇದು ರಾಜ್ಯದ ಆಡಳಿತ ವಿಚಾರ. ಆಡಳಿತದ ಬಗ್ಗೆ ದೇಶಕ್ಕೆ ಪಾಠ ಹೇಳುತ್ತಿದ್ದವರು ಇದನ್ನು ತೋರಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಇವತ್ತು ಸಾಯಾಂಕಾಲದ ಒಳಗೆ ಈಶ್ವರಪ್ಪ ಅವರನ್ನು ಉಚ್ಛಾಟಿಸಲಿ ಎಂದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಮತವಿದೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾವ ವಿಚಾರ ಬೀದಿಗೆ ಬಂದಿದೆ. ಈಗ ಅವರು ಆಡಳಿತದಲ್ಲಿದ್ದಾರೆ. ನಾನು ಮಂತ್ರಿಯಾದಾಗ ಸಿಎಂ ವಿರುದ್ಧ ಮಾತನಾಡಿಲ್ಲ. ಮೊದಲು ನಿಮ್ಮದನ್ನು ಸರಿ ಮಾಡಿಕೊಳ್ಳಿ. ನಿಮ್ಮಲ್ಲಿ 6 ಜನ ಮುತ್ತುರತ್ನಗಳನ್ನು ಇಟ್ಟುಕೊಂಡಿದ್ದಾರೆ. ಇನ್ನು 15 ಜನ ಬೇರೆ ಇದ್ದಾರೆ ಎಂದರು.
ಇದನ್ನೂ ಓದಿ: ನಮಗೆ ಬೇರೆ ದಾರಿಯಿಲ್ಲ, ಕೋವಿಡ್ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯಿಲ್ಲ: ಸುಧಾಕರ್
ಸಿಡಿ ಪ್ರಕರಣದಲ್ಲಿ ಪೊಲೀಸರು ಏನು ಮಾಡುತ್ತಿದ್ದಾರೆ? ಯಾವ ದಿಕ್ಕಿನಲ್ಲಿ ತನಿಖೆ ಸಾಗುತ್ತಿದೆ ಎಂದು ನನಗೆ ಗೊತ್ತಿದೆ. ರಮೇಶ್ ಜಾರಕಿಹೊಳಿ ಕಷ್ಟನಷ್ಟ ಏನೋ, ಎಲ್ಲೆಲ್ಲಿ ನೋವಿದೆಯೋ ಎಂದು ವ್ಯಂಗ್ಯವಾಡಿದರು.
ಸರ್ಕಾರ ಕೋವಿಡ್ ನಿಯಮಾವಳಿ ಮಾಡಿದ ರೀತಿ ಸರಿ ಇಲ್ಲ. ಅದು ಸಂಪೂರ್ಣ ವಿಫಲವಾಗಿದೆ. ಕೊರೊನಾ ನಿಯಂತ್ರಣಕ್ಕೆ ಬರಬೇಕು. ಚುನಾವಣಾ ಪ್ರಚಾರ ಸೇರಿದಂತೆ ಎಲ್ಲದನ್ನೂ ನಿಯಂತ್ರಣ ಮಾಡಿ ಎಂದು ಒತ್ತಾಯಿಸಿದರು.