ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ‘ಹೆಬ್ಬೆಟ್ ಗಿರಾಕಿ’ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಟ್ವೀಟ್ ಆಗಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಈ ಟ್ವೀಟ್ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಈ ಅಚಾತುರ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಂತಹ ಪ್ರಮಾದವನ್ನು ಕಾಂಗ್ರೆಸ್ ಎಂದಿಗೂ ಸಹಿಸುವುದಿಲ್ಲ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಏನಿದು ಟ್ವೀಟ್: ಬೆಲೆ ಏರಿಕೆ ಪ್ರಸ್ತಾಪಿಸಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್, ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತ ರಕಾರರಿಲ್ಲದೆ ಆಟವೇ ನಡೆಯುವುದಿಲ್ಲ. ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ. ಇಂಧನ ತೈಲಗಳಲ್ಲಿ ಸರ್ಕಾರದ ಆದಾಯ ಹೆಚ್ಚಿದಂತೆ ಭಾರತದಲ್ಲಿ ಬಡತನವೂ ಹೆಚ್ಚುತ್ತಿದೆ. ಹೆಬ್ಬೆಟ್ ಗಿರಾಕಿ ಮೋದಿ ಸರ್ಕಾರದ ಆದಾಯವನ್ನು ಯಾರ ಜೇಬಿಗೆ ತುಂಬುತ್ತಿದ್ದಾರೆ ಎಂದು ಪ್ರಶ್ನಿಸಲಾಗಿದೆ.
ಇದನ್ನೂ ಓದಿ:ನಿಯಮ ಬಾಹಿರ ಕಲ್ಲು ಗಣಿಗಾರಿಕೆ ಆರೋಪ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ
ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಕರ್ನಾಟಕ ಬಿಜೆಪಿ, ಹೌದು ನಮ್ಮ ಪ್ರಧಾನಿ ನಿಮ್ಮ ನಾಯಕರಿಗಿಂತ ವಿಭಿನ್ನವಾಗಿದ್ದಾರೆ. ಪ್ರಧಾನಿಯಾಗಿ ಇನ್ನೊಬ್ಬ ಮಹಿಳೆಯರ ಸಿಗರೇಟಿಗೆ ಬೆಂಕಿ ಹಚ್ಚಲಿಲ್ಲ. ಬಾರ್‌ನಲ್ಲಿ ಡ್ಯಾನ್ಸ್ ಮಾಡಲಿಲ್ಲ, ಮಾದಕ ವಸ್ತು ಸಾಗಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿಲ್ಲ, ದೇಶಕ್ಕೆ ಸಮರ್ಪಿತ ಜೀವವದು, ತನ್ನ ಕುಟುಂಬಕ್ಕಲ್ಲ ಎಂದು ಚುಚ್ಚಿದೆ.