ಕಲಬುರಗಿ: ಡಿ.ಕೆ.ಶಿವಕುಮಾರ್ ನನ್ನ ಮಿತ್ರ ಅಲ್ಲ. ಒಂದು ಪಕ್ಷದ ಅಧ್ಯಕ್ಷ ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬೇರೆ, ಅವರ (ಡಿಕೆಶಿ) ಪಕ್ಷ ಬೇರೆ. ಬರೀ ಟಿವಿಯಲ್ಲಿ ‘ಪ್ರತಿಜ್ಞಾ’ ಅಂತಾ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಡಿಕೆಶಿ ಕಾರ್ಯಕ್ರಮಕ್ಕೆ ಮಹತ್ವ ಕೊಡಬೇಕಿಲ್ಲ ಎಂದರು.
ಒಂದು ಮದುವೆ ಮಾಡಿಸಬೇಕಾದರೆ ಊಟ ಹಾಕಿಸುತ್ತೇವೆ. ನಮ್ಮವರು ಅಂತಾ ಎಲ್ಲರೂ ಊಟಕ್ಕೆ ಬರ್ತಾರಾ?. ಡಿಕೆ ಶಿವಕುಮಾರ್ ಅಧಿಕಾರ ಕಾರ್ಯಕ್ರಮವೂ ಹಾಗೆ. ಟವಿಯಲ್ಲಿ ಕಾರ್ಯಕ್ರಮ ಎಲ್ಲರೂ ನೋಡುತ್ತಾರೆ ಎನ್ನಲಾಗದು. ಜನರನ್ನು ಸೇರಿ ತಮ್ಮ ಶಕ್ತಿ ತೋರಿಸಿದ್ದರೆ ‘ಹೌದಪ್ಪ’ ಅಂತಿದ್ದೆ. ಈಗ ಹತ್ತು ಲಕ್ಷ ಜನರ ಸೇರಿದ್ದರು ಎಂದರೂ ನಾವು ಸುಮ್ಮನಿರಬೇಕಾಗುತ್ತದೆ. ಡಿಕೆಶಿ ಶಕ್ತಿ ಏನಿದೆ ಅಂತಾ ನನಗೆ ಗೊತ್ತಿದೆ ಎಂಬುದು ರಮೇಶ ವ್ಯಂಗ್ಯವಾಡಿದರು.
ನಾನು ಡಿಸಿಎಂ ಕೇಳಿಲ್ಲ: ನಾನು ಉಪಮುಖ್ಯಮಂತ್ರಿ ಹುದ್ದೆ ಕೇಳಿಲ್ಲ. ಅದರ ಬೇಡಿಕೆಯೂ ಇಟ್ಟಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಇದೇ ವೇಳೆ ಸಚಿವ ಜಾರಕಿಹೊಳಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸಚಿವರ ರಹಸ್ಯ ಸಭೆ ಮಾಡಿಲ್ಲ ಹಾಗೂ ನಮ್ಮಲ್ಲಿ ಯಾವುದೇ ರೀತಿಯ ಭಿನ್ನಮತ ಇಲ್ಲ. ಆರ್.ಅಶೋಕ್ ಹುಟ್ಟುಹಬ್ಬಕ್ಕಾಗಿ ಸೇರಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಸುಭದ್ರವಾಗಿದೆ. ಯಡಿಯೂರಪ್ಪನವರೇ ಇನ್ನೂ ಮೂರು ವರ್ಷಗಳ ಕಾಲ ಮುಂದುವರೆಯುತ್ತಾರೆ ಎಂದರು.
ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ರಾಜುಗೌಡ, ಮಹೇಶ ಕುಮಟಹಳ್ಳಿ, ಜಿಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜಪಾಟೀಲ ರದ್ದೇವಾಡಗಿ ಇದ್ದರು.