Advertisement

ಗೋವಾದಲ್ಲಿ ಡಿ.ಕೆ. ಶಿವಕುಮಾರ್ ಪ್ರಚಾರ : ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ

04:23 PM Jan 28, 2022 | Team Udayavani |

ಪಣಜಿ: ಕಾಂಗ್ರೆಸ್ ಪಕ್ಷದ ಪರವಾಗಿ ಇಲ್ಲಿಗೆ ಆಗಮಿಸಿ, ದೇಶ ಕಾಯುವ ಸೈನಿಕರ ಪರವಾಗಿ ಧ್ವನಿ ಎತ್ತುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗೋವಾ ದಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಗೋವಾ ಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದು ಮೊದಲ ಬಾರಿಗೆ ಗೋವಾ ಪ್ರದೇಶ ಕಾಂಗ್ರೆಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ನನಗೆ ಬಹಳ ಪ್ರಮುಖವಾದ ದಿನ.ನಾನು ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದೆ.ಆದರೆ ಇಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಮೂಲಕ ರೈತರು ಹಾಗೂ ಸೈನಿಕರ ಪ್ರಾಮುಖ್ಯತೆ ಸಾರಿದ್ದರು.ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದ ರೈತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿದ್ದಾರೆ. ಆ ಮೂಲಕ ದೇಶದ ಅನ್ನದಾತರ ಭವಿಷ್ಯಕ್ಕೆ ಮಾರಕವಾಗಿದ್ದ ಕರಾಳ ಶಾಸನಗಳನ್ನು ಹಿಂಪಡೆಯುವಂತೆ ಮಾಡಿದ್ದಾರೆ. 700 ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಸತ್ತಿದ್ದರೂ ಅವರನ್ನು ಹುತಾತ್ಮರು ಎಂದು ಕೇಂದ್ರ ಸರಕಾರ ಘೋಷಿಸಿಲ್ಲ ಎಂದರು.

ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶದ ಗಡಿ ಕಾಯುತ್ತಿರುವ ಸೈನಿಕರ ವಿಚಾರವಾಗಿ ಮಾತನಾಡಲು ಇಂದು ಇಲ್ಲಿಗೆ ಬಂದಿದ್ದೇನೆ. ನಾನಿಂದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರನ್ನು ಸ್ಮರಿಸಲು ಬಯಸುತ್ತೇನೆ. ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವಾಗ ನಾನು ಸಂಸತ್ತಿನ ಗ್ಯಾಲರಿಯಲ್ಲಿ ಕೂತಿದ್ದೆ. ಬಿಜೆಪಿ ಹಾಗೂ ಇತರೆ ವಿರೋಧ ಪಕ್ಷಗಳು ರಾಜೀವ್ ಗಾಂಧೀಜಿ ಅವರ ನಿಲುವನ್ನು ಪ್ರಶ್ನಿಸಿದ್ದವು ಎಂದರು.

ದೇಶದ ಯುವಕರ ಮೇಲೆ ಅಪಾರ ನಂಬಿಕೆ ಹೊಂದಿದ್ದ ರಾಜೀವ್ ಗಾಂಧಿ ಅವರು ಉತ್ತರಿಸುತ್ತಾ, ನಾವು 16 ವರ್ಷದ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುತ್ತೇವೆ. ಅವರ ಕೈಗೆ ಬಂದೂಕು ನೀಡಿ ಚೀನಾ, ಪಾಕ್ ಹಾಗೂ ಇತರ ಗಡಿಭಾಗ ಕಾಯಲು ನಿಲ್ಲಿಸುತ್ತೇವೆ. ದೇಶದ ಗಡಿ ಕಾಯಲು ಅವರ ಮೇಲೆ ವಿಶ್ವಾಸ ಇಟ್ಟಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಅವರ ಮೇಲೆ ವಿಶ್ವಾಸ ಇಡಬೇಕಲ್ಲವೇ. ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿಯಿಂದ ಸಂಸತ್ತಿನವರೆಗೂ ಜನಪ್ರತಿನಿಧಿಗಳು ಆಯ್ಕೆಯಾಗಬೇಕು. ಯುವಕರಿಗೆ ಮತದಾನದ ಹಕ್ಕು ನೀಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದರು ಎಂದರು.

ಗಡಿ ಕಾಯುತ್ತಾ ದೇಶದ ಬೆನ್ನೆಲುಬಾಗಿರುವ ಸೈನಿಕರ ಘನತೆ ಇಂದು ಮಂಕಾಗುತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಸೈನಿಕರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ ಎಂದರು.

Advertisement

ಗೋವಾ ರಾಜ್ಯ ರಚನೆ ನಂತರ ಈ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಶಾಂತಿ, ಸಹಬಾಳ್ವೆ, ಅಭಿವೃದ್ಧಿಗೆ ಕಾಂಗ್ರೆಸ್ ಒತ್ತು ನೀಡಿತ್ತು.ಕಳೆದ ಚುನಾವಣೆಯಲ್ಲೂ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದರು. ಆದರೆ ಕೇಂದ್ರ ಬಿಜೆಪಿ ಸರ್ಕಾರದ ಹಸ್ತಕ್ಷೇಪದಿಂದ ನಾವು ನಮ್ಮ ಚುನಾಯಿತ ಸದಸ್ಯರನ್ನು ಕಳೆದುಕೊಂಡು, ಬಿಜೆಪಿ ಸರ್ಕಾರ ರಚನೆಯಾಯಿತು. ಆದರೆ ಈ ಸರ್ಕಾರದಿಂದ ಜನ ತೃಪ್ತರಾಗಿದ್ದಾರೆಯೇ? ಖಂಡಿತಾ ಇಲ್ಲ ಎಂದು ಕಿಡಿ ಕಾರಿದರು.

ಈ ಬಾರಿ ಗೋವಾ ಜನ ಕಾಂಗ್ರೆಸ್ ಗೆ ಪೂರ್ಣ ಪ್ರಮಾಣದ ಬೆಂಬಲ ನೀಡಲಿದ್ದಾರೆ. ನಾವು ಕರ್ನಾಟಕದವರು ಗೋವಾ ಜತೆ ಗಡಿ ಹಂಚಿಕೊಂಡಿದ್ದು, ಗೋವಾ ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಇಲ್ಲಿನ ಜನ ವಿದ್ಯಾವಂತರು, ಬುದ್ದಿವಂತರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದು, ಬದಲಾವಣೆ ಬಯಸಿದ್ದಾರೆ ಎಂದು ನಂಬಿದ್ದೇವೆ. ಹೀಗಾಗಿ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಬೇಕು, ಬದಲಾವಣೆಗೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ದೇಶದ ಯುವ ಸಮುದಾಯ, ದೇಶ ಕಾಯುವ ಯೋಧರು, ದೇಶದ ಅನ್ನದಾತರು ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ನೊಂದಿದ್ದಾರೆ. ಎಲ್ಲ ವರ್ಗದ ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ಸೈನಿಕರು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದರೆ ದೇಶದ ಸ್ಥಿತಿ ಏನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next