ನವದೆಹಲಿ: ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸುತ್ತಿದ್ದಂತೆ ನವದೆಹಲಿಗೆ ಆಗಮಿಸಿದ್ದ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಮೊದಲಿಗೆ ಲೋಕನಾಯಕ ಕಟ್ಟಡದಲ್ಲಿರುವ ಜಾರಿ ನಿರ್ದೇಶನಾಲಯ ಕಛೇರಿಯಿಂದ ಡಿಕೆಶಿ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಆರ್.ಎಂ.ಎಲ್. ಆಸ್ಪತ್ರೆಗೆ ಕರೆದುಕೊಂಡುಹೋಗುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಕಾರನ್ನು ತಡೆಗಟ್ಟುವ ಪ್ರಯತ್ನವನ್ನು ನಡೆಸಿದರು.
ಇದೀಗ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಕರೆತಂದಿರುವ ಆರ್.ಎಂ.ಎಲ್. ಆಸ್ಪತ್ರೆಯ ಹೊರಗೆ ಅವರ ಅಭಿಮಾನಿಯೊಬ್ಬ ಅಂಗಿ ಹರಿದುಕೊಂಡು ರಸ್ತೆಯಲ್ಲಿ ಹೊರಳಾಡುತ್ತಿರುವ ದೃಶ್ಯವೊಂದು ಮಾಧ್ಯಮಗಳ ಕೆಮರಾದಲ್ಲಿ ಸೆರೆಯಾಗಿದೆ.
ಶಿವಕುಮಾರ್ ಅವರ ಬಂಧನ ಸುದ್ದಿ ಹೊರಬೀಳುತ್ತಿದ್ದಂತೆಯೇ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳ ಆಕ್ರೋಶ ಮುಗಿಲುಮುಟ್ಟಿದೆ. ರಾಮನಗರದಲ್ಲಿ ಡಿಕೆಶಿ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಮಳವಳ್ಳಿ ಡಿಪೋಗೆ ಸೇರಿದ ಕನಕಪುರದಲ್ಲಿ ನಿಲುಗಡೆ ಹೊಂದಿದ್ದ ಸರಕಾರಿ ಬಸ್ಸಿನ ಗಾಜನ್ನು ಒಡೆದು ಹಾಕಲಾಗಿದೆ. ಇನ್ನೊಂದು ಸರಕಾರಿ ಬಸ್ಸಿನ ಗಾಜುಗಳನ್ನೂ ಸಹ ಆಕ್ರೋಶಭರಿತ ಡಿಕೆಶಿ ಅಭಿಮಾನಿಗಳು ಒಡೆದು ಹಾಕಿದ್ದಾರೆ.
ರಾಮನಗರ ಮತ್ತು ಕನಕಪುರ ನಡುವೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಡಿಕೆಶಿ ಅಭಿಮಾನಿಗಳ ಪ್ರತಿಭಟನೆಯಿಂದ ಸರಕಾರಿ ಬಸ್ಸುಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಸಂಚರಿಸುವ ಸರಕಾರಿ ಬಸ್ಸುಗಳ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಕೆ.ಎಸ್.ಆರ್.ಟಿ.ಸಿ. ನಿರ್ಧರಿಸಿದೆ.
ಮುಂಜಾಗರುಕತಾ ಕ್ರಮವಾಗಿ ರಾಜ್ಯದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇನ್ನು ರಾಮನಗರದಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.