ಬೆಂಗಳೂರು: ಭಾರತ್ ಜೋಡೋ ಯಾತ್ರೆಯನ್ನು ಶಾಸಕರು ಲೈಟಾಗಿ ತೆಗೆದುಕೊಳ್ಳಬಾರದು. ಯಾರ್ಯಾರು ಎಷ್ಟು ಶ್ರಮ ಹಾಕುತ್ತೀರಿ ಎಂಬುದನ್ನು ಎಐಸಿಸಿ ಗಮನಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯಾತ್ರೆ, ತಿರಂಗ ಯಾತ್ರೆಯಲ್ಲಿ ಕಾಣಿಸಿಕೊಂಡು ಎಲ್ಲೋ ಹೋಗಿ ಕುಳಿತಿರುವುದು ಗಮನಿಸಲಾಗಿದೆ. ಹೀಗಾಗಿ, ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತಿಯೊಬ್ಬ ಶಾಸಕರೂ ಭಾಗಿಯಾಗಬೇಕು ಎಂದು ತಾಕೀತು ಮಾಡಿದ್ದಾರೆ.
ರಾಜ್ಯದಲ್ಲಿ 21 ದಿನ ಭಾರತ್ ಜೋಡೋ ಯಾತ್ರೆ ಹಿನ್ನಲೆಯಲ್ಲಿ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕೆಪಿಸಿಸಿ ಸಂಯೋಜಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಸಿಗಲಿದೆ. ಕಾರ್ಯಕರ್ತರು, ಮುಖಂಡರು ಯಾವುದೇ ಪ್ರಭಾವಕ್ಕೆ ಒಳಗಾಗದೆ ಗೆಲ್ಲುವ ಸಾಮರ್ಥ್ಯ ಇರುವವರು ಯಾರು ಎಂದು ಗೌಪ್ಯ ಪತ್ರ ಕೊಡಿ. ಅದು ನನಗೆ, ಸೋನಿಯಾಗಾಂಧಿ, ರಾಜ್ಯ ಉಸ್ತುವಾರಿ ಅವರಿಗೆ ಮಾತ್ರ ಗೊತ್ತಿರುತ್ತದೆ. ಶಾಸಕಾಂಗ ಪಕ್ಷದ ನಾಯಕರಿಗೂ ಗೊತ್ತಿರುವುದಿಲ್ಲ ಎಂದೂ ಹೇಳಿದರು. ಈ ಮೂಲಕ ಪಕ್ಷದಲ್ಲೇ ಅಧ್ಯಕ್ಷರೇ ಸುಪ್ರೀಂ ಎಂದು ಸಿದ್ದರಾಮಯ್ಯ ಬೆಂಬಲಿಗರಿಗೂ ಎಚ್ಚರಿಕೆ ಸಂದೇಶ ರವಾನಿಸಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಯಾರಿಗೆ ಕೆಲಸ ಮಾಡೋಕೆ ಆಗಲ್ಲ, ಯಾರೂ ವಹಿಸಿದ ಕೆಲಸ ಮಾಡುವುದಿಲ್ಲ. ಅಂತವರಿಗೆ ರೆಸ್ಟ್ ಕೊಡಬೇಕಾಗುತ್ತದೆ. ಎಐಸಿಸಿ ಒಂದು ಕಮಿಟಿ ಬಂದಿದೆ. ಎಲ್ಲವನ್ನೂ ಗಮನಿಸುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿ ಹೊಸಬರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.ಯಾವುದೇ ಅಜೆಂಡಾ ಇಟ್ಟುಕೊಳ್ಳದೆ ಕೆಲಸ ಮಾಡಿ ಎಂದು ನೇರವಾಗಿಯೇ ಹೇಳಿದರು.
ಆ.3ರಂದು ಸಿದ್ದರಾಮಯ್ಯ ಹುಟ್ಟು ಹಬ್ಬ ಮಾಡಿದ್ದರು. ಅದರ ಉಸ್ತುವಾರಿ ರಾಯರೆಡ್ಡಿ ವಹಿಸಿದ್ದರು. ಕಾರ್ಯಕ್ರಮಕ್ಕೆ ಜನ ಬಂದರು, ಆದರೆ ಟ್ರಾಫಿಕ್ ಮ್ಯಾನೇಜ್ ಆಗಲಿಲ್ಲ. ಅದನ್ನು ನೋಡಿ ನಾನು ಸ್ವಾತಂತ್ರ್ಯ ನಡಿಗೆ ಸಂದರ್ಭದಲ್ಲಿ ಟ್ರಾಫಿಕ್ ಆಗದಂತೆ ನೋಡಿಕೊಂಡೆ. ಮೇಕೆದಾಟು ಪಾದಯಾತ್ರೆ ಮಾಡಿದ್ದೆ. ಅದು ಐತಿಹಾಸಿಕ ಅಲ್ಲವೇ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಅತ್ಯಂತ ಸಂಘಟಿತವಾಗುತ್ತಿದೆ. ಕಳೆದ 50 ವರ್ಷಗಳಲ್ಲಿ ಇಷ್ಟೊಂದು ತಳಮಟ್ಟದಿಂದ ಸಂಘಟನೆ ಆಗಿರಲಿಲ್ಲ ಎಂದು ಶ್ಲಾಘಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಮಾತನಾಡಿ, ಪ್ರತಿ ವರ್ಷ ಗಾಂಧಿ ಜಯಂತಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದೆವು.ಭಾರತ್ ಜೋಡೋ ಯಾತ್ರೆ ಇರುವ ಕಾರಣ ಈ ಬಾರಿ ಚಾಮರಾಜನಗರ ಜಿಲ್ಲೆ ನಂಜನಗೂಡಿನ ಬದನವಾಳು ಗ್ರಾಮದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿಸ ಚಿವರಾದ ರಮಾನಾಥ್ ರೈ, ಆಂಜನೇಯ ಉಪಸ್ಥಿತರಿದ್ದರು.
ಪ್ರಿಯಾಂಕ ಬರ್ತಾರೆ
ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಪ್ರಿಯಾಂಕ ಗಾಂಧಿ ಪಾಲ್ಗೊಳ್ಳಲಿದ್ದಾರೆ. ರಾಹುಲ್‌ಗಾಂಧಿ ಜತೆ ಅವರೂ ಹೆಜ್ಜೆ ಹಾಕಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.