Advertisement

DK ಜಿಲ್ಲೆಯ ಗ್ರಾಮೀಣ ಅಭಿವೃದ್ಧಿ ಸಂಕಲ್ಪ: ಗುಂಡೂರಾವ್‌

12:53 AM Nov 02, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಸಂಕಲ್ಪ ತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸ ಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಮಂಗಳೂರಿನ ನೆಹರೂ ಮೈದಾನ ದಲ್ಲಿ ಬುಧವಾರ ಜರಗಿದ ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.ಕನ್ನಡ ಭಾಷೆಯ ಜತೆಗೆ ತುಳು, ಕೊಂಕಣಿ, ಬ್ಯಾರಿ, ಕೊಡವ ಸಹಿತ ವಿವಿಧ ಭಾಷೆಯ ಜನರು ಸಮ್ಮಿಲನಗೊಂಡಿರುವ ವಿಶೇಷ ನಾಡು ನಮ್ಮದು. ಕನ್ನಡದ ಜತೆಗೆ ಈ ಎಲ್ಲ ಭಾಷೆಗಳ ಅಭಿವೃದ್ಧಿಗೆ ಸರಕಾರ ಸ್ಪಂದಿಸಲಿದ್ದು, ಎಲ್ಲರೂ ಸಹಿಷ್ಣುತೆ ಹಾಗೂ ಪ್ರೀತಿ ವಿಶ್ವಾಸದಿಂದ ಬಾಳುವಂತಾಗಬೇಕು ಎಂದರು.

ದ.ಕ. ಜಿಲ್ಲೆಯಲ್ಲಿ
ಯಶಸ್ವಿ ಗ್ಯಾರಂಟಿ
ಗೃಹಲಕ್ಷ್ಮೀ ಯೋಜನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಇದುವರೆಗೆ 3.44 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿದ್ದು, ಎಲ್ಲರಿಗೂ ಮಾಸಿಕ 2 ಸಾವಿರ ರೂ. ಜಮೆಯಾಗುತ್ತಿದೆ. ತಾಂತ್ರಿಕ ಸಮಸ್ಯೆಗಳಿಂದ ಜಮೆಯಾಗದ ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 2.48 ಲಕ್ಷ ಫಲಾನುಭವಿಗಳಿದ್ದಾರೆ. ಇದುವರೆಗೆ 17.30 ಕೋ. ರೂ. ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಇದುವರೆಗೆ 183 ಲಕ್ಷ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು 6,072 ಲಕ್ಷ ರೂ. ಆದಾಯ ಬಂದಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಪ್ರಶಸ್ತಿ ಪ್ರದಾನ,
ಆದೇಶ ಪತ್ರ ಹಸ್ತಾಂತರ
ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಸಂಘ ಸಂಸ್ಥೆಗಳಿಗೆ 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನೇರ ಪಾವತಿಯಡಿ ನೇಮಕಗೊಂಡ ಪೌರ ಕಾರ್ಮಿಕರಿಗೆ ಸಾಂಕೇತಿಕವಾಗಿ ಆದೇಶ ಪತ್ರ ಪ್ರದಾನಿಸಲಾಯಿತು. ನಗರದಲ್ಲಿ ತಳ್ಳುಗಾಡಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ತಳ್ಳುಗಾಡಿ ವ್ಯಾಪಾರಸ್ಥರ ಪ್ರಮಾಣಪತ್ರವನ್ನು ಇದೇ ವೇಳೆ ಸಾಂಕೇತಿಕವಾಗಿ ವಿತರಿಸಲಾಯಿತು.

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್‌, ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಸಿಇಒ ಡಾ| ಆನಂದ್‌ ಕೆ., ಮನಪಾ ಆಯುಕ್ತ ಆನಂದ್‌ ಸಿ.ಎಲ್‌., ಅಪರ ಜಿಲ್ಲಾಧಿಕಾರಿ ಸಂತೋಷ್‌ ಕುಮಾರ್‌, ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗ್ರವಾಲ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಸಿಬಿ. ರಿಷ್ಯಂತ್‌, ಪ್ರಮುಖರಾದ ಡಾ| ಎಂ.ಪಿ. ಶ್ರೀನಾಥ್‌, ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಪ್ರವೀಣ್‌ಚಂದ್ರ ಆಳ್ವ, ಎಂ. ಶಶಿಧರ ಹೆಗ್ಡೆ, ಭಾಸ್ಕರ್‌ ಕೆ. ನವೀನ್‌ ಡಿ’ಸೋಜಾ, ಎ.ಸಿ. ವಿನಯ್‌ರಾಜ್‌, ಅನಿಲ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಅಭಿವೃದ್ಧಿ ಕಾಮಗಾರಿ
ಜಿಲ್ಲೆಗೆ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಕಿನ್ನಿಗೋಳಿ, ಮರವೂರು, ಕರೋಪಾಡಿ, ಸಂಗಬೆಟ್ಟು, ಮಾಣಿ, ಸರಪಾಡಿ ಮತ್ತು ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿವೆ. 6 ಹೊಸ ಬಹುಗ್ರಾಮ ಕುಡಿಯುವ ನೀರು ಯೋಜನೆಗಳನ್ನು ತೆಗೆದುಕೊಳ್ಳಲಾಗಿದ್ದು, ಮೂಡುಬಿದಿರೆ ಮತ್ತು ಉಳಾçಬೆಟ್ಟು ಯೋಜನೆ ಪ್ರಗತಿಯಲ್ಲಿವೆ. ಜಿ.ಪಂ. ವ್ಯಾಪ್ತಿಯಲ್ಲಿ ಡಿಆರ್‌ಆರ್‌ಪಿ ಯೋಜನೆಯಡಿಯಲ್ಲಿ 3,336 ಕಿ.ಮೀ. ಉದ್ದದ ರಸ್ತೆ ಪೂರ್ಣ ಮಾಡಲಾಗಿದೆ. 2023-24ರಲ್ಲಿ ಸಿಎಂಜಿಎಸ್‌ವೈಯಲ್ಲಿ ಅನುದಾನ ನಿಗದಿಯಾಗಿದ್ದು ಕ್ರಿಯಾಯೋಜನೆ ತಯಾರಿಸುವ ಹಂತದಲ್ಲಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2023-24ನೇ ಸಾಲಿನವರೆಗೆ ದ.ಕ. ಜಿಲ್ಲೆಯಲ್ಲಿ 1,62,540 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. 2023-24ನೇ ಸಾಲಿನಲ್ಲಿ 17 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ನಿಗದಿ ಪಡಿಸಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ 7.58 ಲಕ್ಷ ಮಾನವ ದಿನಗಳನ್ನು ಸೃಜಿಸಿ 4129.11 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next