ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಡಂಬಿ ಮತ್ತು ಕುಂಬಾರಿಕೆಯ ಕೈಗಾರಿಕಾ ಕ್ಲಸ್ಟರ್ ಆರಂಭಿಸುವ ಯೋಜನೆ ಹಾಕಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವಾಲಯ ಹಾಗೂ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ನಗರದಲ್ಲಿ ಬುಧವಾರ ಆಯೋಜಿಸಿದ “ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮುಂದಿನ ದಾರಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಮಾನ ರೂಪದ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕಾ ಕ್ಲಸ್ಟರ್‌ಗಳನ್ನು ಮಾಡಿದರೆ ಅವುಗಳಿಗೆ ಸೌಲಭ್ಯ ಒದಗಿ ಸಲು ಸುಲಭವಾಗುತ್ತದೆ. ಇದರಿಂದ ಕೈಗಾರಿಕೆಗಳಿಗೂ ವಿವಿಧ ರೀತಿಗಳಲ್ಲಿ ಸಹಕಾರಿಯಾಗುತ್ತದೆ. ಆದ್ದರಿಂದ ಏಕರೂಪಿ ಉತ್ಪನ್ನಗಳ ಕೈಗಾರಿಕಾ ಕ್ಲಸ್ಟರ್ ಆರಂಭಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಗಂಜಿಮಠದಲ್ಲಿ 100 ಕೋ. ರೂ. ವೆಚ್ಚದಲ್ಲಿ 104 ಎಕ್ರೆಯಲ್ಲಿ ಸ್ಥಾಪನೆಯಾಗಲಿರುವ ಪ್ಲಾಸ್ಟಿಕ್ ಪಾರ್ಕಿನ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸ ಆರಂಭವಾಗಿದೆ. 6-8 ತಿಂಗಳೊಳಗೆ ಕೈಗಾರಿಕೆಗಳು ಇಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ “ಇನ್ವೆಸ್ಟ್ ಕರ್ನಾ ಟಕ’ ಕಾರ್ಯಕ್ರಮದಲ್ಲಿ ಮಂಗಳೂರಿ ನಲ್ಲಿ ಗ್ರೀನ್ ಹೈಡ್ರೋಜನ್ ಉತ್ಪಾದನಾ ಘಟಕ ಆರಂಭಿಸಲು 7 ಕಂಪೆನಿಗಳು ಆಸಕ್ತಿ ತೋರಿವೆ. ಅವುಗಳಲ್ಲಿ 3 ಘಟಕಗಳನ್ನು ಎಸ್‌ಇಝಡ್ ವ್ಯಾಪ್ತಿಯಲ್ಲಿ ಆರಂಭಿ ಸಲು ಯೋಜಿಸಿದರೆ, ಉಳಿದ ಮೂರನ್ನು ಬಳ್ಕುಂಜೆಯಲ್ಲಿ ಸ್ವಾಧೀನ ಪಡಿಸಲಾಗುವ ಜಾಗದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಜುವೆಲರಿ ಕ್ಲಸ್ಟರ್‌ಗೆ ಅವಕಾಶ
ಬೆಂಗಳೂರಿನ ಎಂಎಸ್‌ಎಂಇ ಡಿಫ್ಒನ ನಿರ್ದೇಶಕ ಜಿ.ಆರ್. ಅಕಾದಾಸ್ ಮಾತನಾಡಿ, ಮಂಗಳೂರಿನಲ್ಲಿ ಜುವೆಲರಿ ಕ್ಲಸ್ಟರ್‌ಗೆ ಉತ್ತಮ ಅವಕಾಶಗಳಿವೆ ಎಂದು ಹೇಳಿದರು.
ಕೆಸಿಸಿಐ ಅಧ್ಯಕ್ಷ ಗಣೇಶ್ ಕಾಮತ್, ಕೆಸಿಸಿಐ ನಿರ್ದೇಶಕ ಆನಂದ್ ಜಿ. ಪೈ, ಎಂಎಸ್‌ಎಂಇ ಡಿಎಫ್ಒ ಜಂಟಿ ನಿರ್ದೇಶಕ ದೇವರಾಜ್ ಕೆ. ಮೊದಲಾದವರಿದ್ದರು.