Advertisement

ದ.ಕ. ಜಿಲ್ಲೆಯ ಅಂಗನವಾಡಿಗಳಿಗೂ ಕೊಳೆತ ಮೊಟ್ಟೆ!

12:31 AM Jul 19, 2023 | Team Udayavani |

ಪುತ್ತೂರು: ಹಾಸನ, ಹಾವೇರಿ, ಕೊಡಗು ಜಿಲ್ಲೆಯಲ್ಲಿನ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಆಗುತ್ತಿರುವ ಬೆನ್ನಲ್ಲೇ ದ.ಕ. ಜಿಲ್ಲೆಯ ಕೆಲವು ಅಂಗನವಾಡಿಗಳಲ್ಲೂ ಕೊಳತೆ ಮೊಟ್ಟೆಗಳು ಪತ್ತೆಯಾಗುತ್ತಿವೆ.

Advertisement

ಪುತ್ತೂರು ತಾಲೂಕಿನ ಭಕ್ತಕೋಡಿ ಅಂಗನವಾಡಿ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ಅಂಗನವಾಡಿಗಳಲ್ಲಿ ಈ ಸಮಸ್ಯೆ ಕಂಡು ಬಂದಿದ್ದು ಇಲಾಖೆಗೆ ಮೇಲಿಂದ ಮೇಲೆ ದೂರುಗಳು ಬರುತ್ತಿವೆ. ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಂಡಿರುವ ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಯೋಜನೆಯ ಭಾಗವಾಗಿ ವಿತರಿಸುತ್ತಿರುವ ಮೊಟ್ಟೆಗಳು ಸಂಪೂರ್ಣ ಕಳಪೆಯಾಗಿದ್ದು ಬೇಯಿಸಿ ಸಿಪ್ಪೆ ಸುಲಿದಾಗ ಒಳಗೆ ಕಪ್ಪು ಬಣ್ಣದಲ್ಲಿ ಕೊಳೆತು ಹೋಗಿರುವ ಅಂಶ ಬೆಳಕಿಗೆ ಬರುತ್ತಿದೆ; ಅದನ್ನು ಸೇವಿಸುವಂತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಹವಾಮಾನ ಕಾರಣ?
ಮೊಟ್ಟೆ ಪೂರೈಕೆ ಗುತ್ತಿಗೆದಾರರ ಪ್ರಕಾರ, ಸಾವಿರಾರು ಮೊಟ್ಟೆಗಳ ಪೈಕಿ ಕೆಲವು ಹಾಳಾಗುವುದು ಸಹಜ. ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ಕೊಳೆಯುವ ಪ್ರಮಾಣ ಹೆಚ್ಚಾಗಿದೆ. ಪೂರೈಕೆ ಆಗಿರುವ ಮೊಟ್ಟೆ ಕೊಳೆತಿದ್ದರೆ ಬದಲಿ ಮೊಟ್ಟೆ ನೀಡುತ್ತೇವೆ ಎನ್ನುತ್ತಾರೆ ಗುತ್ತಿಗೆದಾರರು.

ಟೆಂಡರ್‌ ಪ್ರಕ್ರಿಯೆ ಬಳಿಕ ಸಮಸ್ಯೆ

ಈ ಹಿಂದೆ ಅಂಗನವಾಡಿಗಳಿಗೆ ಸ್ಥಳೀಯವಾಗಿಯೇ ಮೊಟ್ಟೆ ಖರೀದಿಸುತ್ತಿದ್ದುದರಿಂದ ಸಮಸ್ಯೆ ಇರಲಿಲ್ಲ. ಈಗ ಟೆಂಡರ್‌ ಪ್ರಕ್ರಿಯೆ ಆರಂಭವಾದ ಬಳಿಕ ಸಮಸ್ಯೆ ಉದ್ಭವವಾಗಿದೆ. ಹಿಂದಿನ ಮಾದರಿಯಲ್ಲಿಯೇ ಮೊಟ್ಟೆ ವಿತರಣೆಗೆ ಕ್ರಮ ಕೈಗೊಳ್ಳುವುದು ಸೂಕ್ಯ ಎಂದು ಸಿಡಿಪಿಒ ಅಧಿಕಾರಿಗಳು ಉದಯವಾಣಿಗೆ ಪ್ರತಿಕ್ರಿಯಿಸಿದ್ದಾರೆ.

Advertisement

ಈಗಾಗಲೇ ರಾಜ್ಯಾದ್ಯಂತ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಬಗ್ಗೆ ತನಿಖೆ ನಡೆಸಲು ತಂಡ ರಚಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆ ವಿತರಣೆಯಾಗುತ್ತಿರುವ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದು ತನಿಖಾ ವರದಿ ಸಲ್ಲಿಕೆಯಾದ ಬಳಿಕ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next