ಹೊಸದಿಲ್ಲಿ: ಕೋವಿಡ್-19 ವೈರಸ್‌ನಿಂದ ಎಲ್ಲೆಡೆ ಲಾಕ್‌ಡೌನ್ ಆಗಿದ್ದರಿಂದ ಆಸ್ಪತ್ರೆಯಲ್ಲಿ ರೋಗಿಗಳು ರಕ್ತ ಸಿಗದೆ ಪರದಾಟ ನಡೆಸುತ್ತಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಖ್ಯಾತ ಫುಟ್ಬಾಲ್ ಆಟಗಾರರೊಬ್ಬರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅವರು ಬೇರ್ಯಾರೂ ಅಲ್ಲ, ಫುಟ್ಬಾಲ್ ಪ್ರೇಮಿಗಳಿಗೆ ನೆಚ್ಚಿನ ಆಟಗಾರ ಜೆಜೆ ಲಾಲ್ಬೆಕುಲುವಾ.
ಹೌದು, 29 ವರ್ಷದ ಲಾಲ್ಬೆಕುಲುವಾ, ಮಿಜೋರಾಂ ಮೂಲದವರು, ಭಾರತ ತಂಡದ ಖ್ಯಾತ ಆಟಗಾರರಲ್ಲಿ ಒಬ್ಬರು, ಸದ್ಯ ಐಎಸ್‌ಎಲ್‌ನ ಪ್ರಮುಖ ತಂಡವಾಗಿರುವ ಚೆನ್ನೈಯನ್ ತಂಡದ ಪ್ರತಿನಿಧಿ.
ಲಾಲ್ಬೆಕುಲುವಾ ಶ್ರೇಷ್ಠದಾನ ಮೂರು ವಾರಗಳಿಂದ ಮಿಜೋರಾಂ ಕೂಡ ಲಾಕ್‌ಡೌನ್‌ನಲ್ಲಿದೆ. ಈಗ ಮತ್ತೆ ಎರಡು ವಾರ ಲಾಕ್‌ಡೌನ್ ಅನ್ನು ಕೇಂದ್ರ ಸರಕಾರ ವಿಸ್ತರಿಸಿದೆ. ಈ ಬೆನ್ನಲ್ಲೇ ಮಿಜೋರಾಂನ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ಶೇಖರಣೆ ಕಡಿಮೆ ಆಗಿದೆ. ಇದರಿಂದ ನೂರಾರು ರೋಗಿಗಳು ತೊಂದರೆಗೆ ಸಿಲುಕಿದ್ದಾರೆ, ಈ ವಿಷಯ ತಿಳಿಯುತ್ತಿದ್ದಂತೆ ಲಾಲೆºಕುಲುವಾ ಸ್ವತಃ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಬಗ್ಗೆ ಲಾಲ್ಬೆಕುಲುವಾ ಹೇಳಿದ್ದು ಹೀಗೆ, “ಲಾಕ್‌ಡೌನ್ ಇರುವುದರಿಂದ ಎಲ್ಲ ರಕ್ತ ನಿಧಿ ಘಟಕಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಹೀಗಾಗಿ ಆಸ್ಪತ್ರೆಯವರು ಸರಕಾರೇತರ ಸಂಘ ಸಂಸ್ಥೆ “ಯಂಗ್ ಮಿಝೊ ಸಂಸ್ಥೆ’ಯ ಸಹಾಯ ಬೇಡಿಕೊಂಡರು. ಈ ವಿಷಯ ನನಗೆ ಗೊತ್ತಾಯಿತು, ತಡ ಮಾಡದೇ ತತ್‌ಕ್ಷಣ ಮಿಜೋರಾಂನ ಡಾರ್ಟ್ ಲ್ಯಾಂಗ್‌ನಲ್ಲಿರುವ ಸೈನೊದ್ ಆಸ್ಪತ್ರೆಗೆ ಭೇಟಿ ನೀಡಿದೆ. ಒಟ್ಟು ನನ್ನೊಂದಿಗೆ 33 ಮಂದಿ ರಕ್ತದಾನ ಮಾಡಲು ತಯಾರಾಗಿದ್ದರು, ಪರೀಕ್ಷೆ ನಡೆಸಿದ ವೈದ್ಯರು 27 ಮಂದಿ ರಕ್ತ ನೀಡಬಹುದು ಎಂದರು, ನಾನು ಅಥವಾ ಬೇರ್ಯಾರೋ ಅನ್ನುವ ವಿಷಯ ಇಲ್ಲಿ ಬರುವುದಿಲ್ಲ,ಕೋವಿಡ್-19 ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡುವ ಅಗತ್ಯವಿದೆ. ಇಂತಹ ಒಂದು ಪುಣ್ಯ ಕಾರ್ಯದಲ್ಲಿ ನೆರವಾಗಲು ನನಗೆ ಶಕ್ತಿ ನೀಡಿದ ಸರ್ವಶಕ್ತನಿಗೆ ನಾನು ಕೃತಜ್ಞನಾಗಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲೇ ಇರಿ, ಹೊರಗಡೆ ಬರಬೇಡಿ’ ಎಂದು ಲಾಲೆºಕುಲುವಾ ತಿಳಿಸಿದ್ದಾರೆ.