ಉಡುಪಿ, ಅ.4: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನೌಕರರ ಪ್ರತಿಭಟನೆಯ ನೇರ ಪರಿಣಾಮ ಎಲ್ಲ ಸರಕಾರಿ ಆಸ್ಪತ್ರೆಗಳ ಮೇಲೆ ಬೀರುತ್ತಿದ್ದರೂ, ಉಡುಪಿ ಜಿಲ್ಲಾಸ್ಪತ್ರೆಗೆ ಈ ಬಿಸಿ ತಟ್ಟಿಲ್ಲ. ಇದಕ್ಕೆ ಮುಖ್ಯ ಕಾರಣ ಆಸ್ಪತ್ರೆಯ ಸಮಸ್ಯೆಗಳಿಗೆ “ಗ್ರೂಪ್ ಡಿ’ ನೌಕರರು ಟ್ರಬಲ್ ಶೂಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವುದು.
ಆರೋಗ್ಯ ಇಲಾಖೆಗೆ ಒತ್ತಡ : ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಹೊರಗುತ್ತಿಗೆಯನ್ನು ರದ್ದು ಮಾಡಿ ಇಲಾಖೆಯ ಅಡಿಯಲ್ಲೇ ನೇಮಕ ಮಾಡಿ ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎನ್‌ಎಚ್‌ಎಂ ನೌಕರರು ಅನೇಕ ದಿನಗಳಿಂದ ಮುಷ್ಕರ ನಿರತರಾಗಿದ್ದಾರೆ. ಇದು ಆರೋಗ್ಯ ಇಲಾಖೆಯ ಬಹುತೇಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ.
ಹೆಚ್ಚಿನ ವಿದ್ಯಾರ್ಹತೆ : ಜಿಲ್ಲಾಸ್ಪತ್ರೆಯ “ಡಿ’ ಗ್ರೂಪ್ ನೌಕರರ ಶೈಕ್ಷಣಿಕ ವಿದ್ಯಾರ್ಹತೆ ಮೇಲ್ಮಟ್ಟದಲ್ಲಿದೆ. ಎಸೆಸೆಲ್ಸಿಯಿಂದ ಎಂಬಿಎ ಪದವಿ ಪಡೆದ ಮೆರಿಟ್ ಅಭ್ಯರ್ಥಿಗಳು ಜಿಲ್ಲಾಸ್ಪತ್ರೆಯಲ್ಲಿ “ಡಿ’ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅವರಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರುವ “ಡಿ’ ಗ್ರೂಪ್ ನೌಕರರನ್ನು ಕೋವಿಡ್ ಲ್ಯಾಬ್, ರೋಗಿಗಳ ನೋಂದಣಿ ಸೇರಿದಂತೆ ಇತರ ಡಾಟಾ ಎಂಟ್ರಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಆಸ್ಪತ್ರೆಯಲ್ಲಿ ಸರಕಾರದಿಂದ ನಿಯೋಜಿತ 12 ಡಿ ಗ್ರೂಪ್ ನೌಕರರಿದ್ದು, ಅವರಲ್ಲಿ ಮೂರು ವರ್ಷದ ಹಿಂದೆ ಆಯ್ಕೆಯಾದ 8 ಮಂದಿಯೂ ಎಸೆಸೆಲ್ಸಿಯಲ್ಲಿ ಮೆರಿಟ್ ಅಂಕಗಳೊಂದಿಗೆ ಉತ್ತೀರ್ಣಗೊಂಡ ಅಭ್ಯರ್ಥಿಗಳಾಗಿದ್ದಾರೆ.
ಸಮರ್ಪಕ ನಿರ್ವಹಣೆ : ಉಡುಪಿ ಜಿಲ್ಲಾಸ್ಪತ್ರೆಗೆ ಎನ್‌ಎಚ್‌ಎಂ ನೌಕರರ ಪ್ರತಿಭಟನೆ ಕಾವು ಹೆಚ್ಚಿನ ಪ್ರಮಾಣದಲ್ಲಿ ತಟ್ಟಿಲ್ಲ. ಆರಂಭಿಕ ಹಂತದಲ್ಲಿ ಆಸ್ಪತ್ರೆಯ ಕೋವಿಡ್ ಲ್ಯಾಬ್‌ನಲ್ಲಿ ಡಾಟಾ ಎಂಟ್ರಿ ಆಪರೇಟರ್‌ಗಳು ಇಲ್ಲದೆ ಸಮಸ್ಯೆಯಾಗಿತ್ತು. ಇದರ ಪರಿಹಾರಕ್ಕಾಗಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಸರಕಾರದಿಂದ ನಿಯೋಜಿತ 8 ಮಂದಿ ಶೈಕ್ಷಣಿಕ ಅರ್ಹತೆ ಹೊಂದಿರುವ ಗ್ರೂಪ್ “ಡಿ’ ನೌಕರರನ್ನು ಡಾಟಾ ಎಂಟ್ರಿ ಕೆಲಸಕ್ಕೆ ತಾತ್ಕಾಲಿವಾಗಿ ನಿಯೋಜಿಸಿದರು. ಇದರಿಂದ ಆಸ್ಪತ್ರೆ ಕೆಲಸ ಹಾಗೂ ರೋಗಿಗಳಿಗೆ ಯಾವುದೇ ಸಮಸ್ಯೆಯಾಗಲಿಲ್ಲ.
ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ : ಜಿಲ್ಲಾಸ್ಪತ್ರೆಯಲ್ಲಿ ಎನ್‌ಎಚ್‌ಎಂ ನೌಕರರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದೇವೆ. ಪ್ರಸ್ತುತ ಪದವಿ ಸೇರಿದಂತೆ ಕಂಪ್ಯೂಟರ್ ಜ್ಞಾನ ಹೊಂದಿರುವ “ಡಿ’ ಗ್ರೂಪ್ ನೌಕರರು ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. -ಡಾ| ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ.
-ವಿಶೇಷ ವರದಿ