ಕೊಪ್ಪಳ: ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಹಾಗೂ ದಮನಿತರಿಗೆ ಡಿ. ದೇವರಾಜು ಅರಸು ಅವರು ಘನತೆಯ ಬದುಕು ಕಲ್ಪಿಸಿಕೊಟ್ಟರು. ಅವರಿಗೆ ಧ್ವನಿಯಾದವರು ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಡೆದ ಡಿ. ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರಿಗೆ ದಲಿತ ಹಾಗೂ ದಮನಿತರ ಕಷ್ಟ, ನೋವುಗಳ ಅರಿವಿತ್ತು. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರು ಮುಖ್ಯ ವಾಹಿನಿಗೆ ಬರಬೇಕು ಎಂಬುದು ಅವರ ಆಶಯವಾಗಿತ್ತು. ಅದರಂತೆ ಅವರ ಉದ್ಧಾರಕ್ಕಾಗಿ ತಮ್ಮ ಆಡಳಿತದಲ್ಲಿ ಹಲವಾರು ಯೋಜನೆ ಕಾರ್ಯಕ್ರಮ ಜಾರಿಗೆ ತಂದರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉಚಿತ ಶಾಲೆ ಹಾಗೂ ವಸತಿ ಶಾಲೆ ಆರಂಭಿಸಿದರು. ದಮನಿತರಿಗೆ ಸಮಾಜದಲ್ಲಿ ಘನತೆಯ ಬದುಕು ಕಲ್ಪಿಸಿಕೊಟ್ಟರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಂಬಂಧಿಯಾಗಿದ್ದರೂ, ತಮ್ಮ ಸಂಪತ್ತನ್ನು ತ್ಯಜಿಸಿ ಸಾಮಾನ್ಯರಲ್ಲಿ ಅಸಾಮಾನ್ಯರಂತೆ ಬದುಕಿದರು. ಉತ್ತಮ ಕುಸ್ತಿಪಟುವಾಗಿದ್ದರು. ಉಳುಮೆ ಮಾಡುತ್ತಿದ್ದರು. ಹಾಗಾಗಿ ಅವರಿಗೆ ರೈತರ, ದುರ್ಬಲ ವರ್ಗದವರ ಕಷ್ಟದ ಅರಿವಿತ್ತು. ದೀನ ದಲಿತರ ಬಗ್ಗೆ ಕಳಕಳಿ, ಸಂವೇದನೆ ಹೊಂದಿದ್ದರು. ರಾಜ್ಯದಲ್ಲಿ ದೀರ್ಘಕಾಲ ಆಳ್ವಿಕೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಶಿಕ್ಷಣದಿಂದ ಮಾತ್ರ ಹಿಂದುಳಿದ ವರ್ಗದವರ ಪ್ರಗತಿ ಸಾಧ್ಯ ಎಂಬ ಡಾ| ಅಂಬೇಡ್ಕರ್ ಆಶಯದಂತೆ ತಮ್ಮ ಆಡ ಳಿತದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು ಎಂದರು.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರಾಜು ಅರಸು ಅವರು ಪರಿವರ್ತನೆಯ ಹರಿಕಾರರು. ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ನೀಡಿದ ಧೀಮಂತ ನಾಯಕರು. ಹಿಂದುಳಿದ ವರ್ಗದ ನಾಯಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತಂದರು. ಸಾಮಾನ್ಯ ಜನರೂ ಶಾಸಕ, ಸಂಸದರಾಗುವಂತೆ ಅವಕಾಶ ನೀಡಿದರು. 12ನೇ ಶತಮಾನದ ಬಸವಣ್ಣನವರ ಚಿಂತನೆಗಳನ್ನು ಮೈಗೂಡಿಸಿಕೊಂಡು, ಅದರಂತೆ ಎಲ್ಲರಿಗೂ ಸಮಾನ ಅವಕಾಶ ನೀಡಿ, ಸುಧಾರಣೆ ತಂದರು ಎಂದರು. ಅರ್ಥಶಾಸ್ತ್ರ ಪ್ರಾಧ್ಯಾಪಕ ಶರಣಬಸಪ್ಪ ಚ. ಬಿಳೆಯಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಖಜಾನೆ ಅಧಿಕಾರಿ ಅಪ್ಪಾರಾಯ ಎಂ. ಮದರಿ ಅವರಿಗೆ ಜಿಲ್ಲಾ ಮಟ್ಟದ ಡಿ. ದೇವರಾಜು ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲೆಯ ಡಿ. ದೇವರಾಜು ಅರಸು ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತ್ಯುತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಾಧರ ದೊಡ್ಡಮನಿ ಅವರು ಸ್ವಾಗತಿಸಿದರು. ಸದಾಶಿವ ಹಾಗೂ ತಂಡವು ನಾಡಗೀತೆ, ವಚನ ಗೀತೆ ಪ್ರಸ್ತುತ ಪಡಿಸಿದರು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಎಡಿಸಿ ಸಾವಿತ್ರಿ ಬಿ.ಕಡಿ, ನಗರಸಭೆ ಸದಸ್ಯ ಉಮಾ ಗವಿಸಿದ್ಧಪ್ಪ ಪಾಟೀಲ್, ಅಮ್ಜದ್ ಪಟೇಲ್, ಅಮೀನ್ ಅಕ್ಬರ್, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್, ವಿರೂಪಾಕ್ಷಪ್ಪ ಮೋರನಾಳ, ಪ್ರಭಾಕರ್ ರಾಮಣ್ಣ, ರಾಮಣ್ಣ ಬಡಿಗೇರ, ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಇತರರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗವಿಸಿದ್ದೇಶ್ವರ ಮಠದಿಂದ ನಡೆದ ಡಿ. ದೇವರಾಜ ಅರಸು ಭಾವಚಿತ್ರದ ಮೆರವಣಿಗೆಗೆ ಸಂಸದ ಸಂಗಣ್ಣ ಕರಡಿ ಚಾಲನೆ ನೀಡಿದರು. ವಸ್ತುಪ್ರದರ್ಶನ ಮಳಿಗೆಗಳನ್ನು ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.