ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ರವಿವಾರ ನಡೆದ ರಸ್ತೆ ಅಪಘಾತದಲ್ಲಿ ಅಸುನೀಗಿದ್ದಾರೆ. ಅವರ ನಿಧನಕ್ಕೆ ಕಾರಣ ವಾದದ್ದು ಸಂಚಾರ ನಿಯಮದ ಉಲ್ಲಂಘನೆ ಎಂಬ ಅಂಶ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಅವರು ಪ್ರಯಾಣಿ ಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಮಿಸ್ತ್ರಿ ಮತ್ತು ಸಹ ಪ್ರಯಾಣಿಕ ಸೀಟ್ ಬೆಲ್ಟ್ ಹಾಕಿರಲಿಲ್ಲ, ಹೀಗಾಗಿಯೇ ಅವರಿಗೆ ಅದು ಪ್ರತಿಕೂಲವಾಯಿತು ಎಂಬ ಅಂಶ ವ್ಯಕ್ತವಾಗುತ್ತಿದೆ.
ಸಂಚಾರ ನಿಯಮಗಳ ಪಾಲನೆ ಬಗ್ಗೆ ನಮ್ಮ ದೇಶದಲ್ಲಿ ಎಷ್ಟು ನಿರ್ಲಕ್ಷ್ಯ ಇದೆ ಎಂಬುದಕ್ಕೆ ಮಿಸ್ತ್ರಿ ಅವರ ದುರಂತ ಸಾವಿನ ಒಂದು ಘಟನೆ ಸಾಕ್ಷಿಯೇ ಆಗಿದೆ ಎಂಬುದನ್ನು ವಿಷಾದಪೂರ್ವಕವಾಗಿ ಹೇಳಲೇಬೇಕಾದ ಅನಿ ವಾರ್ಯ ಸ್ಥಿತಿ ಉಂಟಾಗಿದೆ. ಅವರು ಪ್ರಯಾಣಿಸುತ್ತಿದ್ದ ಕಾರು ಸಾಮಾನ್ಯರು ಖರೀದಿ ಮಾಡಲು ಸಾಧ್ಯವಿಲ್ಲದಷ್ಟು ದುಬಾರಿ ಎನ್ನುವುದು ಸತ್ಯ. ದುಬಾರಿ ಬೆಲೆಯ ಕಾರು ಅದು ಆಗಿದ್ದರೂ ಹಿಂದಿನ ಸೀಟುಗಳಲ್ಲಿ ಏರ್‌ಬ್ಯಾಗ್‌ಗಳು ಇರಲಿಲ್ಲ ಎನ್ನಲಾಗುತ್ತಿದೆ. ದೊಡ್ಡ ಮೊತ್ತ ನೀಡಿ ಖರೀದಿ ಮಾಡಿದ ಕಾರಿನ ಹಿಂದಿನ ಸೀಟುಗಳಲ್ಲಿ ಏರ್‌ಬ್ಯಾಗ್ ಇರಲಿಲ್ಲ ಎಂದರೆ ಅದು ಆಲೋಚಿಸಬೇಕಾದ ಅಂಶವಾಗಿದೆ.
ಮಿತಿ ಮೀರಿದ ವೇಗದಿಂದ ಕಾರು ಚಲಾಯಿಸುತ್ತಿದ್ದದ್ದೂ ದುರಂತಕ್ಕೆ ಕಾರಣ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ 20 ಕಿ.ಮೀ. ದೂರವನ್ನು ಮಿಸ್ತ್ರಿ ಅವರ ಕಾರು ಕೇವಲ 9 ನಿಮಿಷಗಳಲ್ಲಿ ಕ್ರಮಿಸಿದೆ. ಹೀಗಾಗಿ ಹೈಎಂಡ್ ಕಾರುಗಳಲ್ಲಿ ವೇಗದ ಮಿತಿಗೆ ಅವಕಾಶ ಇಲ್ಲ ಎಂಬ ಅಂಶವೂ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳಲ್ಲಿ ಅಸುನೀಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿಯೇ ಎಂಟು ಆಸನ ಸಾಮರ್ಥ್ಯದ ಸಣ್ಣ ಕಾರುಗಳಲ್ಲಿ ಕೂಡ ಆರು ಏರ್‌ಬ್ಯಾಗ್‌ಗಳು ಕಡ್ಡಾಯ ಎಂಬ ನಿಯಮ ಜಾರಿ ಮಾಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಈ ಬೆಳವಣಿಗೆಯೂ ಒಂದು ರೀತಿಯಲ್ಲಿ ಸಮಾಧಾನಕರ ಅಂಶ. ಆದರೆ ಗ್ರಾಹಕರ ಜೇಬಿಗೆ ಹೊರೆ ಎನ್ನುವುದೂ ಸತ್ಯವಾದ ವಿಚಾರ. ಸದ್ಯ ಸಾಮಾನ್ಯ ಕಾರುಗಳಲ್ಲಿ ಚಾಲಕ ಮತ್ತು ಸಹ ಪ್ರಯಾಣಿಕನಿಗೆ ಮಾತ್ರ ಏರ್ ಬ್ಯಾಗ್ ಸೌಲಭ್ಯ ಕಲ್ಪಿಸಲಾಗಿದೆ.
ಸೀಟ್‌ಬೆಲ್ಟ್ ಧಾರಣೆ ಸೇರಿದಂತೆ ಸಂಚಾರ ನಿಯಮಗಳನ್ನು ಸ್ಪಷ್ಟ ವಾಗಿ ಉಲ್ಲಂ ಸಲಾಗುತ್ತಿದೆ ಎಂದು ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಆಗಾಗ ಬಿಡುಗಡೆ ಮಾಡುವ ವರದಿಗಳಿಂದ ವೇದ್ಯ ವಾಗುತ್ತದೆ. ಹಗಲಿನಷ್ಟೇ ಖಚಿತವಾಗಿರುವ ವರದಿಗಳು ಪ್ರಕಟವಾಗುತ್ತಿದ್ದರೂ ವಾಹನ ಚಲಾಯಿಸುವವರು ಸಂಚಾರ ನಿಯಮ ಪಾಲನೆಯತ್ತ ನಿರ್ಲಕ್ಷ್ಯವನ್ನೇಕೆ ತೋರುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಸಂಚಾರ ನಿಯಮ ಪಾಲನೆಯ ಹೊಣೆ ಹೊತ್ತ ಅಧಿಕಾರಿಗಳು ನಿಯಮ ಭಂಜಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲೇಬೇಕು. ವಾಹನ ಚಾಲಕರೂ ನಿರ್ಲಕ್ಷ್ಯ ತೋರದೆ ನಿಯಮ ಪಾಲಿಸಬೇಕು.
ಎನ್ ಸಿ ಆ ರ್‌ಬಿ ಪ್ರಕಾರ 2020ಕ್ಕಿಂತ 2021ರಲ್ಲಿ ಅಪಘಾತ ಪ್ರಮಾಣ ಶೇ.16.8ರಷ್ಟು ಹೆಚ್ಚಾಗಿದೆ. ದೇಶ ಹೊಂದಿರುವ ಒಟ್ಟಾರೆ ರಸ್ತೆ ಜಾಲದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪ್ರಮಾಣ ಶೇ. 2.1. ಅಲ್ಲಿ ಅಪಘಾತಗಳ ಪ್ರಮಾಣ ಶೇ.30.3. ರಾಜ್ಯ ಹೆದ್ದಾರಿಗಳ ಪ್ರಮಾಣ ಶೇ. 9 ಆಗಿದ್ದು, ಅಲ್ಲಿ ಶೇ. 23.9ರಷ್ಟು ಅಪಘಾತಗಳು ಉಂಟಾಗುತ್ತವೆ. ಹೀಗಾಗಿ ಸರಕಾರಗಳ ಸಹಿತ ಅಧಿಕಾರಿಗಳು ಸಂಚಾರ ನಿಯಮ ಪಾಲನೆಯತ್ತ ಹಾಗೂ ಅದರ ಕಟ್ಟುನಿಟ್ಟಿನ ಅನುಷ್ಠಾನದತ್ತ ಮನಸ್ಸು ಮಾಡಬೇಕಾಗಿದೆ.