ಬೆಂಗಳೂರು: ಸಾಲ ತೀರಿಸಲು ವಾಣಿಜ್ಯ ಬಳಕೆಗೆ ಪಡೆದುಕೊಂಡಿದ್ದ ಸಿಲಿಂಡರ್‌ಗಳನ್ನು ಕೊಡದೆ ವಂಚಿಸಿದ ಮೂವರು ಆರೋಪಿಗಳನ್ನು ಅಮೃತ್ತ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಿ.ಸಿ.ಪಾಳ್ಯದ ವಿನಾಯಕ ಲೇಔಟ್‌ನ ಸುಹೇಲ್ ಅಹಮ್ಮದ್ (34), ಧಣಿಸಂದ್ರದ ಅಮರಜ್ಯೋತಿ ಲೇಔಟ್‌ನ ಸೈಯದ್ ಜೈಫ್ ಪಾಷ (20) ಹಾಗೂ ಶಿವಮೊಗ್ಗದ ಓಟೂರಿನ ಗಣೇಶ್ ಅಲಿಯಾಸ್ ಷಣ್ಮುಖ (31) ಬಂಧಿತರು.
ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 100 ತುಂಬಿದ ಸಿಲಿಂಡರ್‌ಗಳು, ಒಂದು ಓಮಿನಿ ವ್ಯಾನ್, ಟಾಟಾ ಸೂಪರ್ ಏಸ್, ಆಟೋರಿಕ್ಷಾ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂಓದಿ:ಪೋಷಕರೇ ಗಮನಿಸಿ… ರಜಾ ಅವಧಿಯು ಮೋಜಿನ ಜೊತೆ ನಿರಂತರ ಕಲಿಕೆಯಾಗಲಿ
ಕೆಂಪಾಪುರದ ಕಾಫಿ ಬೋರ್ಡ್ ಲೇಔಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಭಾರತ್ ಸಿಲಿಂಡರ್‌ಗಳನ್ನು ನೀಡುವ ಪ್ರತೀಕ್ ಎಂಟರ್ ಪ್ರೈಸಸ್ ಏಜೆನ್ಸಿ ಇದ್ದು, ಆರೋಪಿಗಳು ಈ ಏಜೆನ್ಸಿಯಲ್ಲಿ 100 ವಾಣಿಜ್ಯ ಬಳಕೆಯ ಸಿಲಿಂಡರ್ ಪಡೆದುಕೊಂಡಿದ್ದರು. ವಾಪಸ್ ಹಣ ಹಾಗೂ ಖಾಲಿ ಸಿಲಿಂಡರ್‌ಗಳನ್ನು ಕೊಡುವುದಾಗಿ ತಿಳಿಸಿದ್ದರು. ಆದರೆ, ಆರೋಪಿಗಳು ಏಜೆನ್ಸಿಗೆ ಹಣ ಹಾಗೂ ಖಾಲಿ ಸಿಲಿಂಡರ್‌ಗಳನ್ನು ನೀಡಿರಲಿಲ್ಲ. ಹೀಗಾಗಿ, ಏಜೆನ್ಸಿಯ ವ್ಯವಸ್ಥಾಪಕ ರಘು ಆರೋಪಿಗಳ ವಿರುದ್ಧ ಅಮೃತ್ತಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಅಮೃತ್ತಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಜಿ. ಗುರುಪ್ರಸಾದ್, ಪಿಎಸ್‌ಐ ಲಕ್ಷ್ಮೀಕಾಂತ್ ಹಾಗೂ ಸಿಬ್ಬಂದಿ ಆರೋಪಿ ಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಗಳು ಸಾಲ ಮಾಡಿಕೊಂಡಿದ್ದು, ಅದನ್ನು ತೀರಿಸಲು ಈ ರೀತಿಯ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.