ಕೋಲ್ಕತಾ: ಯಾಸ್ ಚಂಡಮಾರುತದಿಂದ ಸಂಭವಿಸಿದ ನಷ್ಟದ ಪರಿಶೀಲನಾ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮಬಂಗಾಳ ರಾಜ್ಯಪಾಲ ಜಗದೀಪ್ ಧಾನ್ಕಾರ್ ಅವರು ಆಗಮಿಸಿದ್ದರು. ಮಮತಾ ಬ್ಯಾನರ್ಜಿ 30 ನಿಮಿಷಗಳ ಕಾಲ ತಡವಾಗಿ ಸಭೆಗೆ ಆಗಮಿಸಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ಲೇಡಿ ಪೋಲಿಸ್ ಅಸಭ್ಯವಾಗಿ ವರ್ತನೆ ವಿರುದ್ಧ ಕಣ್ಣೀರಿಟ್ಟ ಗರ್ಭಿಣಿ ಮಹಿಳೆ
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಗೆ ತಡವಾಗಿ ಆಗಮಿಸಿದ ನಂತರ ಯಾಸ್ ಚಂಡಮಾರುತದಿಂದ ರಾಜ್ಯದಲ್ಲಿ ಸಂಭವಿಸಿದ ನಷ್ಟಕ್ಕೆ ಸಂಬಂಧಿಸಿದ ದಾಖಲೆ(ಪೇಪರ್ಸ್)ಗಳನ್ನು ನೀಡಿದ ಕೂಡಲೇ ಅಲ್ಲಿಂದ ನಿರ್ಗಮಿಸಿರುವುದಾಗಿ ವರದಿ ವಿವರಿಸಿದೆ.
ಮಮತಾ ಬ್ಯಾನರ್ಜಿ ಅವರ ನಡವಳಿಕೆ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಗವರ್ನರ್ ಧಾನ್ಕಾರ್, ಪ್ರಧಾನಿ ನರೇಂದ್ರ ಮೋದಿ ಅವರ ಪರಿಶೀಲನಾ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರೆ ಅದು ರಾಜ್ಯದ ಹಿತಾಸಕ್ತಿ ಪೂರೈಸಲು ಸಾಧ್ಯವಾಗುತ್ತಿತ್ತು. ಆದರೆ ತಿಕ್ಕಾಟದ ಸ್ವಭಾವದಿಂದಾಗಿ ರಾಜ್ಯದ ಬಗ್ಗೆ ಅಥವಾ ಪ್ರಜಾಪ್ರಭುತ್ವದ ಬಗ್ಗೆ ನಿರಾಸಕ್ತಿ ಹೊಂದಿರುವುದನ್ನು ತೋರಿಸುತ್ತದೆ. ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಸಭೆಗೆ ಗೈರು ಹಾಜರಾಗುವುದು ಸಾಂವಿಧಾನಿಕವಾಗಿ ಸಮರ್ಪಕವಾದ ನಡೆಯಲ್ಲ ಎಂದು ತಿಳಿಸಿದ್ದಾರೆ.
“ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಭೇಟಿ ಮಾಡಿ, ಯಾಸ್ ಚಂಡಮಾರುತದಿಂದ ಸಂಭವಿಸಿದ ಹಾನಿ ಬಗ್ಗೆ ವಿವರಿಸಿದ್ದೇನೆ. ಈ ಸಂದರ್ಭದಲ್ಲಿ ಕೋಣೆಯಲ್ಲಿ ಇತರ ಅಧಿಕಾರಿಗಳು ಇರಲಿಲ್ಲವಾಗಿತ್ತು. ನಂತರ ರಾಜ್ಯ ಸರ್ಕಾರದ ವರದಿಯನ್ನು ಪ್ರಧಾನಿ ಅವರಿಗೆ ಹಸ್ತಾಂತರಿಸಿ, ಕೇಂದ್ರದಿಂದ 20 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಮಾಡಿಕೊಂಡಿರುವುದಾಗಿ” ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.