Advertisement
ಚೆನ್ನೈ/ತಿರುವನಂತಪುರಂ: ಲಕ್ಷದ್ವೀಪದತ್ತ ಸಾಗುತ್ತಿರುವ ಒಖೀ ಚಂಡಮಾರುತವು ತಮಿಳುನಾಡು, ಕೇರಳ ಕರಾವಳಿಯನ್ನು ಅಕ್ಷರಶಃ ನಡುಗಿಸಿದೆ. ಚಂಡಮಾರುತದ ಪ್ರಭಾವದಿಂದಾಗಿ ಈ ಎರಡೂ ರಾಜ್ಯಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
Related Articles
ಇದೇ ವೇಳೆ, 38ರಷ್ಟು ಮೀನುಗಾರಿಕಾ ದೋಣಿಗಳು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಅದರಲ್ಲಿರುವವರಿಗೆ ನೌಕಾಪಡೆಯು ಆಹಾರ ಮತ್ತಿತರ ಪರಿಹಾರ ಕಿಟ್‌ಗಳನ್ನು ಒದಗಿಸಿದೆ. ಜತೆಗೆ, ಇತರೆ ದೋಣಿಗಳ ಶೋಧ ಕಾರ್ಯವನ್ನೂ ನಡೆಸಲಾಗುತ್ತಿದ್ದು, ಒಟ್ಟು ಎಷ್ಟು ಮಂದಿ ಬೆಸ್ತರು ನೀರಿಗಿಳಿದಿದ್ದರು ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ ಎಂದು ಸರ್ಕಾರ ಹೇಳಿದೆ.
Advertisement
ಜಪಾನ್ ನೆರವು:ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ನೆರವಿಗೆ ಜಪಾನ್‌ನ ಸರಕು ನೌಕೆಯೊಂದು ಧಾವಿಸಿದ್ದು, 60 ಮೀನುಗಾರರನ್ನು ರಕ್ಷಿಸಿದೆ. ಇನ್ನೊಂದೆಡೆ, ನಾಪತ್ತೆಯಾಗಿರುವ ಮೀನುಗಾರರ ಕುಟುಂಬ ಸದಸ್ಯರು ಆತಂಕಕ್ಕೀಡಾಗಿದ್ದು, ಶುಕ್ರವಾರ ಕೊಲ್ಲಂ ಮತ್ತು ತಿರುವನಂತಪುರದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಬೆಸ್ತರನ್ನು ರಕ್ಷಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಆಡಳಿತಾರೂಢ ಎಲ್‌ಡಿಎಫ್ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿ ಕಿಡಿಕಾರಿದ್ದು, ಸೂಕ್ತ ಮುಂಜಾಗರೂಕತಾ ಕ್ರಮ ಕೈಗೊಂಡಿಲ್ಲ ಹಾಗೂ ರಕ್ಷಣಾ ಕಾರ್ಯಾಚರಣೆ ಬಗ್ಗೆಯೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿವೆ. 579 ಮರಗಳು ಧರೆಗೆ:
ಚಂಡಮಾರುತದಿಂದಾಗಿ 1,200 ಮಂದಿ ತೊಂದರೆಗೆ ಸಿಲುಕಿದ್ದು, ಅವರನ್ನೆಲ್ಲ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಅತ್ಯಧಿಕ ಹಾನಿಯಾಗಿದೆ. ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸಮರೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ತಿರುನಲ್ವೇಲಿ ಮತ್ತು ಕನ್ಯಾಕುಮಾರಿಯಲ್ಲಿ 579 ಮರಗಳು ಧರೆಗುರುಳಿದ್ದು, ಆ ಪೈಕಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿದ್ದ 329 ಮರಗಳನ್ನು ತೆರವುಗೊಳಿಸಲಾಗಿದೆ. ವಿದ್ಯುತ್ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ, 100 ಡೀಸೆಲ್ ಚಾಲಿತ ಜನರೇಟರ್‌ಗಳನ್ನು ಕಳುಹಿಸಿಕೊಟ್ಟಿದ್ದೇವೆ. 18 ದೋಣಿಗಳಲ್ಲಿದ್ದ 76 ಮೀನುಗಾರರನ್ನು ರಕ್ಷಿಸಲಾಗಿದೆ. ಒಟ್ಟು 29 ದೋಣಿಗಳು ಹಾಗೂ 106 ಬೆಸ್ತರು ಸಮುದ್ರಕ್ಕಿಳಿದಿದ್ದರು. ಉಳಿದವರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದೂ ಸಿಎಂ ಮಾಹಿತಿ ನೀಡಿದ್ದಾರೆ. ಜನರ ಸ್ಥಳಾಂತರ:
ಲಕ್ಷದ್ವೀಪದಲ್ಲಿ ಕಲ್ಪೇನಿ, ಮಿನಿಕಾಯ್, ಕವರತಿ, ಅಗತ್ತಿ, ಅಂಡ್ರೋತ್, ಕಡಮತ್, ಅಮಿನಿ ದ್ವೀಪ ಸೇರಿದಂತೆ ತಗ್ಗುಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಹೆಚ್ಚಿನವರಿಗೆ ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಕಲ್ಪೇನಿಯಲ್ಲಿ ನಿಲ್ಲಿಸಲಾಗಿದ್ದ 5 ದೋಣಿಗಳು ಹಾನಿಗೀಡಾಗಿವೆ. ಏತನ್ಮಧ್ಯೆ, ದೆಹಲಿಯಲ್ಲಿ ಹವಾಮಾನ ಇಲಾಖೆ ಅಧಿಕಾರಿಗಳು ತುರ್ತು ಸಭೆ ನಡೆಸಿದ್ದು, ಚಂಡಮಾರುತಕ್ಕೆ ಸಂಬಂಧಿಸಿ ಚರ್ಚಿಸಿದ್ದಾರೆ. ಕೇರಳದ ಸ್ಥಿತಿಯೇನು?
– ಶುಕ್ರವಾರ 3 ಸಾವು. ಮೃತರ ಸಂಖ್ಯೆ 7ಕ್ಕೇರಿಕೆ
– 29 ಪರಿಹಾರ ಶಿಬಿರಗಳ ಸ್ಥಾಪನೆ
– 491 ಕುಟುಂಬಗಳ 2755 ಮಂದಿಯನ್ನು ಇಲ್ಲಿಗೆ ಸ್ಥಳಾಂತರ
– 56 ಮನೆಗಳು ಸಂಪೂರ್ಣ ಧ್ವಂಸ
– 799 ಮನೆಗಳಿಗೆ ಭಾಗಶಃ ಹಾನಿ ತಮಿಳುನಾಡಿನಲ್ಲಿ ಏನಾಯ್ತು?
– 5 ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
– ಅಪಾಯದ ಮಟ್ಟ ತಲುಪಿದ ತಮಿರಭರಣಿ ನದಿ
– 2 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ಐವರು ನಾಪತ್ತೆ
– 62 ಮನೆಗಳು ಸಂಪೂರ್ಣ ಧ್ವಂಸ
– 240 ಮನೆಗಳಿಗೆ ಭಾಗಶಃ ಹಾನಿ, 579 ಮರಗಳು ಧರೆಗೆ ಮಂಗಳೂರಿಂದ ಹೊರಟಿದ್ದ 2 ಹಡಗು ಮುಳುಗಡೆ
ಮಂಗಳೂರಿನಿಂದ ಲಕ್ಷದ್ವೀಪದತ್ತ ಹೊರಟಿದ್ದ 2 ಸರಕು ಸಾಗಣೆ ಹಡಗುಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಲಕ್ಷದ್ವೀಪದ ಬಳಿಯ ಕವರತಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ.