ಮುಂಬಯಿ : ವಿನಾಶಕಾರಿ ಪ್ರಬಲ ಓಖೀ ಚಂಡಮಾರುತ ಮುಂದಿನ 48 ತಾಸುಗಳಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಅಪ್ಪಳಿಸುವ ನಿರೀಕ್ಷೆ ಇರುವಂತೆಯೇ ಇಂದು ಮಂಗಳವಾರ ಮುಂಬಯಿ ಸುಂಟರ ಗಾಳಿಯ ತೀವ್ರ ಪ್ರತಾಪಕ್ಕೆ ನಲುಗುತ್ತಿದೆ. ಅಕಾಲಿಕ ಮಳೆಗೆ ಗುರಿಯಾಗಿರುವ ಮುಂಬಯಿಯಲ್ಲಿ ಜಡಿ ಮಳೆ ಉಂಟಾಗುವ ಭೀತಿ ಇದೆ.
ಭಾರತೀಯ ಹವಾಮಾನ ಇಲಾಖೆ ಮಹಾರಾಷ್ಟ್ರಕ್ಕೆ ಇಂದು ಮಂಗಳವಾರ ಅತ್ಯಂತ ಪ್ರಬಲ ಓಖೀ ಚಂಡಮಾರುತ ಅಪ್ಪಳಿಸುವ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದೆ.
ಅಂತೆಯೇ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಂದಿನ ಮಟ್ಟಿಗೆ ಮುಂಬಯಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.
ಸಮುದ್ರದಲ್ಲಿ ಭಯಾನಕ ಗಾತ್ರದ ಎತ್ತರೆತ್ತರದ ಹೆದ್ದೆರೆಗಳು ಏಳುತ್ತಿರುವ ಕಾರಣ ಯಾರೂ ಸಮುದ್ರ ತಡಿಗೆ ಹೋಗಕೂಡದು ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ನ ನೈಸರ್ಗಿಕ ಪ್ರಕೋಪ ನಿರ್ವಹಣಾ ಘಟಕ ಜನರಿಗೆ ಎಚ್ಚರಿಕೆ ನೀಡಿದೆ.
ಈ ನಡುವೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಜೂಲಾ, ಮಹುವಾ ಮತ್ತು ಶಿಹೋರ್‌ಗಳಲ್ಲಿನ ತಮ್ಮ ರಾಲಿಗಳನ್ನು ಚಂಡಮಾರುತದ ಕಾರಣ ರದ್ದು ಪಡಿಸಿದ್ದಾರೆ.
ಚಂಡಮಾರುತ ಅಪ್ಪಳಿಸಿದಲ್ಲಿ ವ್ಯಾಪಕ ನಾಶ, ನಷ್ಟ, ಸಂಭಾವ್ಯ ಜೀವಹಾನಿಯ ಸಾಧ್ಯತೆಗಳ ಬಗ್ಗೆ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.