ಮುಂಬಯಿ: ಮಹಾರಾಷ್ಟ್ರದ ಅಲಿಭಾಗ್‌ಗೆ (ರಾಯಘಡ) ಬುಧವಾರ ಮಧ್ಯಾಹ್ನ 110 ಕಿ.ಮೀ. ವೇಗದೊಂದಿಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತ ಕ್ಷೀಣಿಸಿದೆ.
ಗುರುವಾರ ಮತ್ತಷ್ಟು ದುರ್ಬಲ ಆಗುವುದರೊಂದಿಗೆ ಮಧ್ಯಪ್ರದೇಶ ಕಡೆಗೆ ಧಾವಿಸಿದೆ. ಈ ಚಂಡಮಾರುತದಿಂದ ಇದುವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ.
ರಾಯಘಡ ಹಾಗೂ ಥಾಣೆ ಜಿಲ್ಲೆಯಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಗುಜರಾತ್ ಕರಾವಳಿ ಭಾಗದಲ್ಲೂ ಅಷ್ಟಾಗಿ ಹಾನಿ ಸಂಭವಿಸಿಲ್ಲ.
ಮಹಾರಾಷ್ಟ್ರ ಕರಾವಳಿ ಪ್ರದೇಶ, ಮುಂಬೈ ಹಾಗೂ ಉಪ ನಗರಗಳು, ಥಾಣೆ, ಪಾಲ್ಗರ್, ರಾಯಘಡ, ಸಿಂಧು ದುರ್ಗ ಮತ್ತಿತರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.
ಈ ಪ್ರದೇಶಗಳಲ್ಲಿ ಚಂಡಮಾರುತದಿಂದ ಬೃಹತ್ ಮರಗಳು, ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ನೂರಾರು ಮನೆಗಳು ಹಾಗೂ ವಾಹನಗಳು ಜಖಂಗೊಂಡಿವೆ. ಜೊತೆಗೆ ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಕೆಲ ಭಾಗಗಳಲ್ಲಿ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ಎನ್‌ಡಿಆರ್‌ಎಫ್ ತಂಡಗಳು ಬಿರುಸಿನಿಂದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಈ ನಡುವೆ, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲೂ ಶುಕ್ರವಾರ ಮಳೆಯಾಗುವ ಸಾಧ್ಯತೆ ಇದೆ.