ಚೆನ್ನೈ: ಮೈಚಾಂಗ್ ಚಂಡಮಾರುತದ ಪರಿಣಾಮವಾಗಿ ಸೋಮವಾರ ಭಾರೀ ಮಳೆ ಮತ್ತು ಬಿರುಗಾಳಿಯಿಂದ ಚೆನ್ನೈನ ಕಾನತ್ತೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ.
ರನ್‌ವೇ ಜಲಾವೃತಗೊಂಡಿದ್ದರಿಂದ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರಿದ್ದು, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇತರ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ.
ತೀವ್ರ ಹವಾಮಾನ ವೈಪರೀತ್ಯವಾದ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮೊದಲು, ಚೆನ್ನೈ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 9:17 ರಿಂದ ಬೆಳಗ್ಗೆ 11:30 ರವರೆಗೆ ವಿಮಾನಗಳ ಆಗಮನವನ್ನು ಸ್ಥಗಿತಗೊಳಿಸಲಾಗಿತ್ತು.
ಕುಂಭ ದ್ರೋಣ ಮಳೆಯಿಂದ ತಗ್ಗು ಪ್ರದೇಶಗಳು ತೀವ್ರ ಜಲಾವೃತಗೊಂಡಿದ್ದು, ನೀರಿನ ಮಟ್ಟ ಹೆಚ್ಚಾದ ಕಾರಣ, ರಸ್ತೆಯಲ್ಲೇ ಮೊಸಳೆ ಕಾಣಿಸಿಕೊಂಡಿದೆ.
ಚೆನ್ನೈನ ಹಲವು ಮೆಟ್ರೋ ನಿಲ್ದಾಣಗಳ ಬಳಿ ಜಲಾವೃತವಾಗಿದೆ. ಸೇಂಟ್ ಥಾಮಸ್ ಮೆಟ್ರೋ ನಿಲ್ದಾಣದಲ್ಲಿ 4 ಅಡಿಗಳಷ್ಟು ನೀರು ಸಂಗ್ರಹಗೊಂಡಿದ್ದು, ನಿಲ್ದಾಣದ ಪ್ರವೇಶವನ್ನು ಕಡಿತಗೊಳಿಸಲಾಗಿದೆ.