ಹೊಸದಿಲ್ಲಿ/ಭುವನೇಶ್ವರ: ಬಂಗಾಲ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಮೇ 9ರ ವೇಳೆ ಹೊಸ ಚಂಡಮಾರುತ ಏಳುವ ಸಾಧ್ಯತೆಗಳು ಇವೆ. ಹೀಗಾಗಿ, ಮೀನುಗಾರರು ಸಮುದ್ರ ಪ್ರವೇಶ ಮಾಡುವುದು ಬೇಡ ಎಂದು ಬುಧವಾರ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, “ಚಂಡಮಾರುತ ಪರಿಚಲನೆಯು ಮೇ 6ರಿಂದ ಆರಂಭವಾಗಲಿದೆ.
ಮರುದಿನ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪರಿಚಲನೆ ಉಂಟಾಗುವ ಸಾಧ್ಯತೆಯಿದೆ. ಬಂಗಾಲ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಅದು ಗೋಚರಿಸಲಿದೆ. ಚಂಡಮಾರುತ ಚಲಿಸುವ ಮಾರ್ಗದ ಬಗ್ಗೆ ತಿಳಿಸಲಾಗುವುದು’ ಎಂದರು.
“ಈ ಚಂಡಮಾರುತಕ್ಕೆ “ಮೋಚಾ’ ಎಂದು ಹೆಸರಿಡಲಾಗಿದೆ. ಯೆಮೆನ್ ಸರಕಾರ ಅದನ್ನು ಸೂಚಿಸಿದೆ. ಮೇ 9ರಂದು ಚಂಡಮಾರುತ ತೀವ್ರಗೊಳ್ಳಲಿದೆ. ಚಂಡಮಾರುತವು ಉತ್ತರಾಭಿಮುಖವಾಗಿ ಕೇಂದ್ರ ಬಂಗಾಲ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ,’ ಎಂದು ತಿಳಿಸಿದ್ದಾರೆ.
“ಒಡಿಶಾದ ಕರಾವಳಿ ಪ್ರದೇಶಕ್ಕೆ ಚಂಡಮಾರುತದ ಪರಿಣಾಮ ಬೀರಲಿದೆ. ಈಗಾಗಲೇ ರಾಜ್ಯದ ಕರಾವಳಿ ಭಾಗದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಲರ್ಟ್ ಘೋಷಿಸಿದ್ದಾರೆ. ಅಲ್ಲದೇ ಎನ್‌ಡಿಆರ್‌ಎಫ್ ಮತ್ತು ಒಡಿಆರ್‌ಎಎಫ್ ಸಿಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ’ ಎಂದು ಮಹಾಪಾತ್ರ ತಿಳಿಸಿದರು.
ದೇಶದ ಹಲವೆಡೆ ಧಾರಾಕಾರ ಮಳೆ: ಕರ್ನಾಟಕ ಸಹಿತ ದೇಶದ ಹಲವೆಡೆ ಉಂಟಾಗಿರುವ ಬಿಸಿಲ ಬೇಗೆ ಕೊನೆಗೂ ಸದ್ಯಕ್ಕೆ ತಣಿಯುವ ಲಕ್ಷಣಗಳು ಕಾಣುತ್ತಿವೆ. ಕರ್ನಾಟಕ, ದಿಲ್ಲಿ, ಪಂಜಾಬ್, ಹರಿಯಾಣ, ಸಹಿತ ಹಲವೆಡೆ ಬುಧವಾರ ಧಾರಾಕಾರ ಮಳೆಯಾಗಿದೆ. ರಾಷ್ಟ್ರ ರಾಜಧಾನಿ ಹೊಸದಿ ಲ್ಲಿಯಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದಾಗಿ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಗೆ ಇಳಿಕೆಯಾಗಿದೆ. 2017ರ ಬಳಿಕ ಎಪ್ರಿಲ್‌ಗೆ ಸಂಬಂಧಿಸಿದಂತೆ 20 ಮಿಲಿಮೀಟರ್ ಮಳೆಯಾಗಿದ್ದು, ದಾಖಲೆಯಾಗಿದೆ.
ಪಂಜಾಬ್, ಹರಿಯಾಣಗಳ ಹಲವು ಸ್ಥಳಗಳಲ್ಲಿ ಕೂಡ ಮಳೆಯಾಗಿದೆ. ಗುರುಗ್ರಾಮ, ಕೋಲ್ಕತಾ, ಲಕ್ನೋ ಸಹಿತ ಹಲವು ನಗರಗಳಲ್ಲಿ ಧಾರಾಕಾರ ಮಳೆ ಯಿಂದ ಜನಜೀವನ ಅಸ್ತವ್ಯಸ್ತವಾಯಿತು.