ಚೆನ್ನೈ: ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮೇಲೆ ಮ್ಯಾಂಡಸ್ ಚಂಡಮಾರುತದ ಪರಿಣಾಮ ಬೀರಿದ್ದು, ಚೆನ್ನೈಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ತಮಿಳುನಾಡಿನಲ್ಲಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ.
ಶುಕ್ರವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ಮಮಲ್ಲಪುರಂ ಕರಾವಳಿಗೆ ಮ್ಯಾಂಡಸ್ ಚಂಡಮಾರುತ ಅಪ್ಪಳಿಸಿತು. ಇದರಿಂದಾಗಿ ಭಾರೀ ಮಳೆಯಾಗಿದ್ದು, 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿತ್ತು. ಕಟ್ಟುಪಕ್ಕಮ್‌ನಲ್ಲಿ 16 ಸೆ.ಮೀ. ಮಳೆಯಾಗಿದೆ.
ಇದರಿಂದಾಗಿ ಚೆನ್ನೈ, ಮಧುರಾತಂಕಮ್, ಈಸ್ಟ್ ಕೋಸ್ಟ್ ರೋಡ್, ಓಲ್ಡ್ ಮಹಾಬಲಿಪುರಂ ರಸ್ತೆ ಸಹಿತ ಕೆಲವೆಡೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. 16 ಜಿಲ್ಲೆಗಳಲ್ಲಿ ಶನಿವಾರ ಮಳೆಯಿಂದಾಗಿ ರಜೆ ನೀಡಲಾಗಿತ್ತು. ಅಷ್ಟೇ ಅಲ್ಲ, ಸಾರ್ವಜನಿಕ ಸಾರಿಗೆಯನ್ನೂ ರದ್ದು ಮಾಡಲಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬೆಳಗ್ಗೆಯೇ ಪರಿಸ್ಥಿತಿ ಅವಲೋಕಿಸಿದ್ದರು.
ತಮಿಳುನಾಡು ಅಧಿಕಾರಿಗಳ ಪ್ರಕಾರ, ಮ್ಯಾಂಡಸ್‌ನಿಂದ ಭಾರೀ ಪ್ರಮಾಣದ ಹಾನಿಯಾಗಿಲ್ಲ. ರಾಜ್ಯದ ನಾನಾ ಕಡೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ರಾಯಲ್‌ಸೀಮಾ ಮತ್ತು ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ತಿರುಪತಿ ಬಳಿಯ ನಾಯ್ಡುಪೇಟಾದಲ್ಲಿ 281 ಮಿ.ಮೀ. ಮಳೆಯಾಗಿದೆ.