ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ರಾಜ್ಯ ಕರಾವಳಿಯಲ್ಲಿ ಮಳೆ ತಂದುಕೊಡಬಹುದು ಎಂಬ ನಿರೀಕ್ಷೆ ಮೂಡಿಸಿದ್ದ ‘ಫೋನಿ’ ಚಂಡಮಾರುತ ನಿರಾಸೆಯನ್ನಷ್ಟೇ ನೀಡಿದೆ. ಅದರ ಪ್ರಭಾವದಿಂದ ಎರಡು ಮೂರು ದಿನ ಮಳೆಯಾಗಬಹುದು ಎನ್ನಲಾಗಿತ್ತಾದರೂ ‘ಫೋನಿ’ ಈಶಾನ್ಯದತ್ತ ಚಲಿಸಿದ್ದರಿಂದ ಈ ಭಾಗದಲ್ಲಿ ಅದರ ಪರಿಣಾಮ ಕಡಿಮೆಯಾಗಿದೆ.
ಕರಾವಳಿಯ ಬೇಸಗೆಯ ಬಿಸಿ, ಕ್ಷಾಮಕ್ಕೆ ತುಸುವಾದರೂ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.
‘ಫೋನಿ’ ಚಂಡಮಾರುತ ಶುಕ್ರವಾರ ಬೆಳಗ್ಗೆ ಒಡಿಶಾ ತೀರಕ್ಕೆ ಅಪ್ಪಳಿಸಿದ್ದು, ಮಳೆಯಾಗುತ್ತಿದೆ. ಅದು ಪ. ಬಂಗಾಳದತ್ತ ಚಂಡಮಾರುತ ಸಾಗುತ್ತಿದ್ದು, ಇದರ ಪರಿಣಾಮ ಕರ್ನಾಟಕ ಕರಾವಳಿ ತೀರಕ್ಕೆ ಕಡಿಮೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿಂದಿನ ಮುನ್ಸೂಚನೆಯಂತೆ ಅದು ತಮಿಳುನಾಡು, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ್ದರೆ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿ ಕರಾವಳಿ ಕರ್ನಾಟಕದಲ್ಲಿ ಉತ್ತಮ ಮಳೆಯಾಗಬಹುದು ಎಂದು ಅಂದಾಜಿಸಲಾಗಿತ್ತು.
ಉಭಯ ಜಿಲ್ಲೆಗಳಲ್ಲಿ ಮೀನುಗಾರಿಕೆ ಎಂದಿನಂತೆ ನಡೆಯುತ್ತಿದೆ. ಆದರೆ ಎಚ್ಚರದಿಂದಿರಲು ಮೀನುಗಾರರಿಗೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಶುಕ್ರವಾರದಂದು ಬೆಳಗ್ಗೆ ಮತ್ತು ಸಂಜೆ ವೇಳೆಗೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ಮುಂದಿನ ದಿನಗಳಲ್ಲಿ ಚಂಡಮಾರುತ, ಮಳೆಯ ಮುನ್ಸೂಚನೆ ಇಲ್ಲದಿರುವುದರಿಂದ ಕರಾವಳಿ ಪ್ರದೇಶದಲ್ಲಿ ಸೆಕೆ ಹೆಚ್ಚಾಗಲಿದ್ದು, ಗರಿಷ್ಠ ಉಷ್ಣಾಂಶ ಜಾಸ್ತಿಯಾಗಲಿದೆ. ಕರಾವಳಿಯಲ್ಲಿ ಶುಕ್ರವಾರದಂದು 36 ಡಿ.ಸೆ. ಗರೀಷ್ಠ ಉಷ್ಣಾಂಶ ಮತ್ತು 25 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.