Advertisement

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

01:07 AM Oct 26, 2024 | Team Udayavani |

ಭುವನೇಶ್ವರ/ಕೋಲ್ಕತಾ: ಬಂಗಾಲಕೊಲ್ಲಿಯಲ್ಲಿ ಸೃಷ್ಟಿ ಯಾಗಿದ್ದ “ದಾನಾ’ ಚಂಡಮಾರುತದ ಪರೀಕ್ಷೆಯನ್ನು ಒಡಿಶಾ, ಪಶ್ಚಿಮ ಬಂಗಾಲ ರಾಜ್ಯಗಳು ಗೆದ್ದಿವೆ. ಚಂಡ ಮಾರುತ ಅಪ್ಪಳಿಸುವುದಕ್ಕೂ ಮುನ್ನ ಉಭಯ ದೇಶ ಗಳು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಫ‌ಲ ನೀಡಿದ್ದು ಒಡಿಶಾದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಿಎಂ ಮೋಹನ್‌ಚರಣ್‌ ಮಾಝಿ ಹೇಳಿದ್ದಾರೆ.

Advertisement

ಗುರುವಾರ ತಡರಾತ್ರಿ 12 ಗಂಟೆಯ ಸುಮಾರಿಗೆ ದಾನಾ ಚಂಡಮಾರುತ ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿದ್ದು, ಸುಮಾರು ಎಂಟೂವರೆ ಗಂಟೆಗಳ ಬಳಿಕ ಲ್ಯಾಂಡ್‌ಫಾಲ್‌ ಪ್ರಕ್ರಿಯೆ ಪೂರ್ಣವಾಯಿತು ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಭೂಮಿಗೆ ಅಪ್ಪಳಿಸಿದ ಸಮಯದಲ್ಲಿ ಗಾಳಿಯ ವೇಗ 110 ಕಿ.ಮೀ. ಇದ್ದು, ಇದರ ಭೀಕರತೆಗೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ಒಡಿಶಾದಲ್ಲಿ ಯಾವುದೇ ಸಾವು ಇಲ್ಲ: ಪದೇಪದೆ ಚಂಡಮಾರುತಕ್ಕೆ ತುತ್ತಾಗುವ ಒಡಿಶಾ, ಈ ಸಮ ಯ ದಲ್ಲಿ ಶೂನ್ಯ ಸಾವು ಸಾಧಿಸಲು ಯತ್ನಿಸುತ್ತಿತ್ತು. ಈ ಬಾರಿ ಇದರಲ್ಲಿ ಸಫ‌ಲವಾಗಿದೆ. ಸುಮಾರು 10 ಲಕ್ಷ ಜನರನ್ನು ಒಡಿಶಾದಲ್ಲಿ ತಗ್ಗು ಪ್ರದೇಶಗಳಿಂದ ಸ್ಥಳಾಂತರ ಮಾಡ ಲಾಗಿತ್ತು. ಹೀಗಾಗಿ ಅಪಾಯದ ಪ್ರಮಾಣ ತಗ್ಗಿದೆ.

ಬಂಗಾಲದಲ್ಲಿ ಒಬ್ಬನ ಸಾವು: ಮಳೆ ಸಂಬಂಧಿತ ಅವಘಡಗಳಿಗೆ ರಾಜ್ಯದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಬಂಗಾಲದಲ್ಲಿ 2.16 ಲಕ್ಷ ಮಂದಿಯನ್ನು ತಗ್ಗು ಪ್ರದೇಶ ಗಳಿಂದ ಸ್ಥಳಾಂತರ ಮಾಡಲಾಗಿತ್ತು. ಎನ್‌ಡಿಆರ್‌ಎಫ್ ತಂಡಗಳು ಮುಳುಗಡೆಯಾಗಿರುವ ಪ್ರದೇಶಗಳಲ್ಲಿ ರಕ್ಷಣೆಗೆ ಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ.

ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದು ನವೀನ್‌ ಪಟ್ನಾಯಕ್‌
ಪದೇಪದೆ ಚಂಡಮಾರುತಕ್ಕೆ ತುತ್ತಾಗುವ ಒಡಿಶಾದಲ್ಲಿ ಜನರ ರಕ್ಷಣೆಗಾಗಿ ಬೃಹತ್‌ ಮಟ್ಟದಲ್ಲಿ ತಗ್ಗು ಪ್ರದೇಶದಿಂದ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಮೊದಲು ಆರಂಭಿಸಿದ್ದು ನವೀನ್‌ ಪಟ್ನಾಯಕ್‌. ಇದೇ ಮಾದರಿಯನ್ನು ಒಡಿಶಾದಲ್ಲಿ ಈಗಲೂ ಅನುಸರಿಸಲಾಗುತ್ತಿದ್ದು, ಚಂಡಮಾರುತದ ಎಚ್ಚರಿಕೆ ಬೆನ್ನಲ್ಲೇ ಜನರನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.

Advertisement

113 ವರ್ಷದ ಟ್ಯಾಂಕ್‌ ರಕ್ಷಿಸಲು ನೀರು ಸ್ಥಗಿತ
ಕೋಲ್ಕತಾ: ದಾನಾ ಚಂಡಮಾರುತ ಪ್ರಭಾವದಿಂದ ಕೋಲ್ಕತಾದ ಬಹುಭಾಗಕ್ಕೆ ನೀರು ಪೂರೈಕೆ ಮಾಡುವ 113 ವರ್ಷ ಇತಿಹಾಸ ಇರುವ ನೀರಿನ ಟ್ಯಾಂಕ್‌ ಅನ್ನು ರಕ್ಷಿಸಿದ ಅಂಶ ಬೆಳಕಿಗೆ ಬಂದಿದೆ. ಅದಕ್ಕಾಗಿ ಟ್ಯಾಂಕ್‌ನಿಂದ ನೀರು ಪೂರೈಕೆ ಸ್ಥಗಿತಕ್ಕೆ ಕೋಲ್ಕತಾ ಪಾಲಿಕೆ ಅಧಿಕಾರಿಗಳು ತೀರ್ಮಾ ನಿಸಿದ್ದರು. 25 ಲಕ್ಷ ಗ್ಯಾಲನ್‌ ನೀರು ಸಂಗ್ರಹಿಸುವ ಸಾಮರ್ಥ್ಯದ ಟ್ಯಾಂಕ್‌ ಖಾಲಿ ಯಾದ 3.6 ಲಕ್ಷ ಟನ್‌ ತೂಕವಿರುತ್ತದೆ. ಆದರೆ ನೀರು ತುಂಬಿಕೊಂಡಿದ್ದರೆ 4 ಲಕ್ಷ ಟನ್‌ ತೂಕವಿರುತ್ತದೆ.

ರಾತ್ರಿಯಿಡೀ ಕಂಟ್ರೋಲ್‌ ರೂಂನಲ್ಲೇ ಇದ್ದ ಮಮತಾ
ಚಂಡಮಾರುತದ ಸಮಯದಲ್ಲಿ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಲು ಸಹಾಯವಾಗಲಿ ಎಂಬ ಕಾರಣಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾತ್ರಿಯಿಡೀ ಕೋಲ್ಕತಾದ ಕಂಟ್ರೋಲ್‌ ರೂಂನಲ್ಲೇ ಕಳೆದಿದ್ದಾರೆ.

ಪಶ್ಚಿಮ ಬಂಗಾಲದಲ್ಲಿ ಭಾರೀ ಮಳೆ, ಹಾನಿ
ದಾನಾ ಚಂಡಮಾರುತ ಪಶ್ಚಿಮ ಬಂಗಾಲದಲ್ಲಿ ಭಾರೀ ಮಳೆಯಾಗಿದೆ. ಇದರಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಕರಾವಳಿ ಜಿಲ್ಲೆಗಳಾದ ಪೂರ್ವ ಮೇದಿನಿಪುರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳಲ್ಲಿನ ಪ್ರದೇಶಗಳು ಮುಳುಗಡೆ ಯಾಗಿವೆ. ರಾಜ್ಯದಲ್ಲಿ 250 ಮರಗಳು ಹಾಗೂ 175 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. 300ಕ್ಕೂ ಹೆಚ್ಚು ಕಚ್ಚಾ ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು, ವಿಮಾನ ಸೇವೆ ಪುನರಾರಂಭ
ಚಂಡಮಾರುತದಿಂದಾಗಿ ರದ್ದು ಮಾಡಲಾಗಿದ್ದ ವಿಮಾನ, ರೈಲು ಸೇವೆ ಶುಕ್ರವಾರ ಮುಂಜಾನೆ ಯಿಂದಲೇ ಆರಂಭವಾಗಿವೆ. ಕೋಲ್ಕತಾದಲ್ಲಿ ವಿಮಾನ ಸೇವೆ 8 ಗಂಟೆಗೆ ಆರಂಭವಾದರೆ, ರೈಲು ಸೇವೆ 10 ಗಂಟೆಗೆ ಆರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next