ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮಂಗಳವಾರ ರಾತ್ರಿಯಿಂದಲೇ ತೀವ್ರಗೊಳ್ಳಲಿದ್ದು, ಡಿ.4ರಂದು ತಮಿಳುನಾಡು ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರ ಪರಿಣಾಮವಾಗಿ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗಲಿದ್ದು, ಮಂಗಳವಾರವೇ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣ ಸಮಿತಿ(ಎನ್‌ಸಿಎಂಸಿ) ಪರಿಸ್ಥಿತಿಯ ಪರಿಶೀಲನೆ ನಡೆಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಎನ್‌ಸಿಎಂಸಿ, ತ.ನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಮೀನುಗಾರರಿಗೆ ನೀಡಲಾದ ಸಲಹೆ ಹಾಗೂ ರಕ್ಷಣ ಪಡೆಗಳ ನಿಯೋಜನೆ ಕುರಿತು ಪರಿಶೀಲನೆ ನಡೆಸಿದೆ
ಕಳೆದ ವಾರ ಅಬ್ಬರಿಸಿದ್ದ ನಿವಾರ್ ಚಂಡಮಾರುತದ ಬೆನ್ನಲ್ಲೇ ‘ಬುರೆವಿ’ ಹೆಸರಿನ ಮತ್ತೊಂದು ಚಂಡಮಾರುತ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದು, ಶ್ರೀಲಂಕಾದ ತ್ರೀನ್ ಕೊಮಾಲಿಯಿಂದ 370 ಕಿಮೀ, ಪಂಬನ್ ನಿಂದ 600 ಕಿಮೀ ಮತ್ತು ಕನ್ಯಾಕುಮಾರಿಯಿಂದ 770 ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತವಾಗಿದೆ.
ಇದನ್ನೂ ಓದಿ: ಯೋಗಿಗೆ ಸಚಿವ ಸ್ಥಾನ? ಬಿಜೆಪಿಯೊಳಗೆ ಹೆಚ್ಚಿದ ಮುಸುಕಿನ ಗುದ್ದಾಟ
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ವೇಗ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಡಿಸೆಂಬರ್ 2 ರಂದು ರಾತ್ರಿ ಅಥವಾ ಸಂಜೆ ವೇಳೆಗೆ ಗಂಟೆಗೆ 75-85 ಗಂಟೆಯ ವೇಗದೊಂದಿಗೆ ಶ್ರೀಲಂಕಾ ಕರಾವಳಿ ಪ್ರದೇಶ ತ್ರೀನ್ ಕೋಮಾಲಿ ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ತಮಿಳುನಾಡು ಮತ್ತು ಕೇರಳದ ಕೆಲವು ಕರಾವಳಿ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಸಿದ್ದುಗೆ ಲವ್ ಜೆಹಾದ್ ಆಕ್ರೋಶ; ಶಾಂತಿ ಕದಡುವುದೇ ಉದ್ದೇಶ ಎಂದ ಸಿದ್ದು