ಪೋರ್ಟ್ಬ್ಲೇರ್: ಪ್ರಸಕ್ತ ವರ್ಷದ ಮೊದಲ ಚಂಡಮಾರುತ, “ಅಸಾನಿ’ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಕ್ಕೆ ಮಾ. 20ರಂದು ಅಪ್ಪಳಿಸುವ ಸಾಧ್ಯತೆ ಇದೆ.
ಅನಂತರ ವೇಗ ಪಡೆದುಕೊಂಡು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ತಿಳಿಸಿದೆ. ಇದೇ ಬಾರಿಗೆ ಐಎಂಡಿಯು ಪ್ರೀ-ಜೆನೆಸಿಸ್ ಟ್ರ್ಯಾಕ್ ಆ್ಯಂಡ್ ಇಂಟೆನ್ಸಿಟಿ ಫೋರ್‌ಕ್ಯಾಸ್ಟ್ ತಂತ್ರಜ್ಞಾನ ಆಧಾರದಲ್ಲಿ ಈ ರೀತಿಯ ಅಂದಾಜು ಮಾಡಿದೆ.
ಗುರುವಾರದ ಸ್ಥಿತಿಗತಿಗಳ ಪ್ರಕಾರ, ಬಂಗಾಲ ಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅಲ್ಲಿ ಎದ್ದಿರುವ ಚಂಡಮಾರುತದ ಅಲೆ ಗಳು ಮಾ. 19ರ ವರೆಗೆ ಉತ್ತರ-ಈಶಾನ್ಯ ಭಾಗದ ಕಡೆಗೆ ಹರಡುತ್ತವೆ. ಅನಂತರ ವಾಯುಭಾರ ವ್ಯಾಪ್ತಿಯೂ ದೊಡ್ಡದಾಗಿ ಬೆಳೆಯುವುದರಿಂದ ಮಾ.21ರ ಹೊತ್ತಿಗೆ ಚಂಡಮಾರುತವಾಗಿ ಮಾರ್ಪಾಡಾಗಿ, ಗಂಟೆಗೆ 55ರಿಂದ 75 ಕಿ.ಮೀ. ವೇಗ ಪಡೆದುಕೊಂಡು ಅಂಡಮಾನ್‌ನ ಹತ್ತಿ ರಕ್ಕೆ ಸಾಗುತ್ತವೆ ಎಂದು ಇಲಾಖೆ ಹೇಳಿದೆ.
ಮುನ್ನೆಚ್ಚರಿಕೆ ಕ್ರಮವಾಗಿ, ಅಂಡ ಮಾನ್‌ನಲ್ಲಿ ಪ್ರವಾಸೋದ್ಯಮ, ಮೀನು ಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
ಗಾಳಿ- ಮಳೆ ಎಚ್ಚರಿಕೆ: ಮಾ. 17ರಿಂದ 20ರ ವರೆಗೆ ಜೋರಾಗಿ ಗಾಳಿ ಬೀಸಲಿದ್ದು, ಮಾ. 21-22ರಂದು ಬಿರುಗಾಳಿ ಬೀಸು ತ್ತದೆ. ಮಾ. 18ರಿಂದ 21ರ ವರೆಗೆ ಅಂಡ ಮಾನ್ ನಿಕೋಬಾರ್‌ನಲ್ಲಿ ಸಾಮಾನ್ಯ ದಿಂದ ತೀವ್ರ ಪ್ರಮಾಣದ ಮಳೆ ಬೀಳುತ್ತದೆ.