Advertisement

ಬಂಗಾಲ, ಒಡಿಶಾಕ್ಕೆ ಮಧ್ಯಾಂತರ ಪರಿಹಾರ ; ನಷ್ಟದ ಮೌಲ್ಯ 1 ಲಕ್ಷ ಕೋಟಿ: ಬಂಗಾಲ ಸಿಎಂ ಮಮತಾ

09:31 AM May 23, 2020 | Hari Prasad |

ಕೋಲ್ಕತಾ/ಭುವನೇಶ್ವರ: ವಿನಾಶಕಾರಿ ಅಂಫಾನ್‌ ಚಂಡಮಾರುತದಿಂದ ತತ್ತರಿಸಿರುವ ಪಶ್ಚಿಮ ಬಂಗಾಲ ಮತ್ತು ಒಡಿಶಾಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದರು.

Advertisement

ಮೊದಲಿಗೆ ಪಶ್ಚಿಮ ಬಂಗಾಲದ ಹಾನಿಗೀಡಾದ ಪ್ರದೇಶಗಳನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದರು.

ಕೋವಿಡ್ ಬಿಕ್ಕಟ್ಟಿನಿಂದಾಗಿ 83 ದಿನಗಳ ಬಳಿಕ ಇದೇ ಮೊದಲ ಬಾರಿಗೆ ಹೊಸದಿಲ್ಲಿಯಿಂದ ಹೊರಬಂದ ಅವರು, ಬಂಗಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಜೊತೆ ಚಂಡಮಾರುತ ಹಾನಿ ಸಮೀಕ್ಷೆ ನಡೆಸಿದರು.

ಬಳಿಕ ಬಸಿರ್ಹತ್‌ನಲ್ಲಿ ಸಿಎಂ ಮಮತಾ ಸೇರಿದಂತೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ, ರಾಜ್ಯಕ್ಕೆ ಒಂದು ಸಾವಿರ ಕೋಟಿ ರೂ. ಮಧ್ಯಾಂತರ ಪರಿಹಾರ ಘೋಷಿಸಿದರು. ಇದೇ ವೇಳೆ, ಮೃತ ವ್ಯಕ್ತಿಯ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ನೆರವು ನೀಡುವುದಾಗಿ ಪ್ರಕಟಿಸಿದರು.

ಏತನ್ಮಧ್ಯೆ, ವಿಡಿಯೋ ಸಂದೇಶ ನೀಡಿರುವ ಪ್ರಧಾನಿ ಮೋದಿ, ‘ಸಂಕಷ್ಟದ ಪರಿಸ್ಥಿತಿಯಲ್ಲಿ ಇಡೀ ದೇಶವು, ಬಂಗಾಲದ ಜೊತೆ ನಿಂತಿದೆ. ಬಾಧಿತ ಕೃಷಿ, ಇಂಧನ, ಮತ್ತಿತರ ವಲಯಗಳ ಬಗ್ಗೆ ಸಮಗ್ರವಾಗಿ ಸಮೀಕ್ಷೆ ನಡೆಸಲಾಗುವುದು. ರಾಜ್ಯವನ್ನು ಸಹಜ ಸ್ಥಿತಿಗೆ ತರಲು ಹಾಗೂ ಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ಕೇಂದ್ರ ಸರಕಾರ ನೆರವಾಗಲಿದೆ’ ಎಂದು ಭರವಸೆ ನೀಡಿದ್ದಾರೆ.

Advertisement

ಒಂದು ಲಕ್ಷ ಕೋಟಿ ರೂ. ಹಾನಿ: ಚಂಡಮಾರುತದ ಪ್ರಭಾವಕ್ಕೆ 7-8 ಜಿಲ್ಲೆಗಳು ಜರ್ಝರಿತವಾಗಿದೆ. ಶೇ.60ರಷ್ಟು ಜನಸಂಖ್ಯೆ ಇರುವ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಸಿಎಂ ಮಮತಾ ಹೇಳಿದರು. ಕನಿಷ್ಠ 80 ಮಂದಿ ಮೃತಪಟ್ಟಿದ್ದು, ಒಂದು ಲಕ್ಷ ಕೋಟಿ ರೂ.ಗೂ ಅಧಿಕ ಹಾನಿಯಾಗಿದೆ.

ನನ್ನ ಜೀವನದಲ್ಲೇ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ನೋಡಿರಲಿಲ್ಲ. ಸಹಜ ಸ್ಥಿತಿಗೆ ಮರಳಲು ಬಹಳ ಸಮಯ ತೆಗೆದುಕೊಳ್ಳಲಿದೆ. ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾಗಿರುವ 53 ಸಾವಿರ ಕೋಟಿ ರೂ. ನೀಡಿದರೆ ಈ ಸಂಕಷ್ಟದ ಸಮಯದಲ್ಲಿ ನೆರವಾಗಲಿದೆ ಎಂದರು.

22 ಸಾವು: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಂಫಾನ್‌ ಚಂಡಮಾರುತದಿಂದ 22 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕೋಟಿ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಒಡಿಶಾಕ್ಕೆ 500 ಕೋಟಿ. ರೂ
ಪಶ್ಚಿಮ ಬಂಗಾಲದ ಬಳಿಕ ಒಡಿಶಾದಲ್ಲಿ 90 ನಿಮಿಷ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿ ನಡೆಸಿದರು. ಈ ಸಂದರ್ಭದಲ್ಲಿ ಸಿಎಂ ನವೀನ್‌ ಪಟ್ನಾಯಕ್‌ ಇದ್ದರು. ಬಳಿಕ ಮಾತನಾಡಿದ ಪ್ರಧಾನಿ 500 ಕೋಟಿ ರೂ. ತಕ್ಷಣದ ಪರಿಹಾರ ನೀಡುವುದಾಗಿ ಹೇಳಿದ್ದಾರೆ ನರೇಂದ್ರ ಮೋದಿ.

ಇದೇ ವೇಳೆ ಒಡಿಶಾ ಸರಕಾರ ಪ್ರಕಟಣೆ ನೀಡಿ ಚಂಡಮಾರುತದಿಂದಾಗಿ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಸಾವಿರಾರು ಮನೆಗಳಿಗೆ ಹಾನಿಯಾಗಿದೆ. 45 ಮಂದಿ ತೊಂದರೆಗೀಡಾಗಿದ್ದಾರೆ ಎಂದು ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next