ಕಟಪಾಡಿ (ಉಡುಪಿ): ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳದ ಬೆಳೆಯು ತೌಖ್ತೇ ಚಂಡಮಾರುತದ ಪರಿಣಾಮ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅವಧಿ ಪೂರ್ವದಲ್ಲಿಯೇ ಈ ಋತುವಿನ ಮಾರುಕಟ್ಟೆಯ ಓಟವನ್ನು ನಿಲ್ಲಿಸಲಿದೆ.
ಚಂಡಮಾರುತದ ಪರಿಣಾಮ ಮಟ್ಟುಗುಳ್ಳ ಬೆಳೆಯುವ ಪ್ರದೇಶದಲ್ಲಿ ಉಪ್ಪು ನೀರು ಎಲ್ಲೆಂದರಲ್ಲಿ ಹರಿದು ಮತ್ತು ಹೆಚ್ಚಿನ ಪ್ರದೇಶವು ನೀರಿನಿಂದ ತೇವಯುಕ್ತಗೊಂಡು ಇನ್ನೇನು ಸುಮಾರು 10 ದಿನಕ್ಕಾಗುವಷ್ಟು ಫಸಲು ಮಾತ್ರ ಲಭಿಸಲಿದ್ದು, ಅವಧಿ ಪೂರ್ವದಲ್ಲಿಯೇ ಬೆಳೆಯು ಮುಕ್ತಾಯಗೊಳ್ಳಲಿದೆ ಎಂದು ಬೆಳೆಗಾರರು ತಮ್ಮ ಸಂಕಷ್ಟವನ್ನು ತೆರೆದಿಟ್ಟಿದ್ದಾರೆ.
ಋತುವಿಡೀ ಪ್ರಕೃತಿ ಮುನಿಸು: ಈ ಬಾರಿ ಮಟ್ಟುಗುಳ್ಳ ಬೆಳೆಯ ಋತುವಿಡೀ ಪ್ರಕೃತಿಯ ಮುನಿಸಿಗೊಳಗಾಗಿ ಇಳುವರಿ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದು, ಮತ್ತೆ ಸಸಿ ನಾಟಿ ಮಾಡಿ ಮಟ್ಟುಗುಳ್ಳವನ್ನು ಬೆಳೆದಿದ್ದು, ಇನ್ನೇನು ಫಸಲು ಕೈ ಸೇರಬೇಕೆನ್ನುವ ಹೊತ್ತಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ದುಸ್ಥಿತಿ ಮಟ್ಟುಗುಳ್ಳ ಬೆಳೆಗಾರರದ್ದಾಗಿದೆ.
ಬೇಡಿಕೆ ಹೆಚ್ಚಳ -ಗುಳ್ಳ ಇಲ್ಲ : ಕೋವಿಡ್ ಲಾಕ್ಡೌನ್ ಈ ಸಂದರ್ಭದಲ್ಲಿ ಬೇಡಿಕೆಯು ಹೆಚ್ಚಿದ್ದು, ಆದರೆ ಹೆಚ್ಚಿನ ಪ್ರಮಾಣದ ಮಟ್ಟುಗುಳ್ಳ ಇಲ್ಲವಾಗಿದೆ. ಅಕಾಲಿಕ ಮಳೆಯಿಂದಾಗಿ ಬೆಳೆಗಾರರು ನಷ್ಟ ಹೊಂದುವಂತಾಗಿತ್ತು. ಬಳಿಕ ಹೆಚ್ಚು ಪ್ರಮಾಣದ ಮಳೆಯಿಂದ ಬೆಳೆ ನಷ್ಟ, ಬಳಿಕ ಉಬ್ಬರದ ಪರಿಣಾಮ ಗದ್ದೆಗಳಿಗೆ ಉಪ್ಪು ನೀರು ನುಗ್ಗಿ ಬೆಳೆಹಾನಿ, ಇದೀಗ ತೌಖ್ತೇ ಚಂಡಮಾರುತದ ದುಷ್ಪರಿಣಾಮ ಬೆಳೆ ಹಾನಿ ಸೇರಿದಂತೆ ಈ ಬಾರಿ ಮಟ್ಟುಗುಳ್ಳ ಬೆಳೆಯು ಈ ಋತು ಸಂಪೂರ್ಣವಾಗಿ ಬೆಳೆಗಾರರು ಸಂಕಷ್ಟಕ್ಕೆ ಬಿದ್ದಿದ್ದರು.
ಜಿಲ್ಲಾಧಿಕಾರಿ ಬಂದರೂ ಪರಿಹಾರ ಪ್ಯಾಕೇಜ್ ಮರೀಚಿಕೆ : ಮಟ್ಟುಗುಳ್ಳ ಬೆಳೆ ಬೆಳೆದು ಫಸಲು ಕೈ ಸೇರುವ ಪ್ರತೀ ಹಂತದಲ್ಲೂ ಪ್ರಕೃತಿ ವಿಕೋಪದಿಂದ ಮಟ್ಟುಗುಳ್ಳ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದನ್ನು ಶಾಸಕರು, ಜಿಲ್ಲಾಕಾರಿ, ತೋಟಗಾರಿಕಾ ಸಹಿತ ಇತರೇ ಅಕಾರಿಗಳು ಸ್ಥಳಕ್ಕಾಗಮಿಸಿ ಬೆಳೆ ನಷ್ಟವನ್ನು ವೀಕ್ಷಿಸಿ ಸರಕಾರದ ಮಟ್ಟದಲ್ಲಿ ವಿಶೇಷ ಪ್ಯಾಕೇಜ್ ಒದಗಿಸುವ ಭರವಸೆಯ ಆಶಾಭಾವನೆಯು ಮರೀಚಿಕೆಯಾಗುಳಿದಿದೆ ಎಂದು ತಮ್ಮ ಸಂಕಷ್ಟವನ್ನು ನೆನಪಿಸಿಕೊಂಡರು.
ಇದನ್ನೂ ಓದಿ:ಬದಲಾಗಬೇಕಾಗಿದೆ ದೇಶದ ಆರೋಗ್ಯ ವ್ಯವಸ್ಥೆ
ಮಟ್ಟುಗುಳ್ಳ ಬೆಳೆಗಾರರು ಗದ್ದೆಯ ಹುಣಿಯ ಎತ್ತರಕ್ಕೆ ಆವರಿಸಿದ್ದ ನೆರೆ ನೀರಿನ ದುಷ್ಪರಿಣಾಮವಾಗಿ ಅಳವಡಿಸಲಾದ ಮಲ್ಚಿಂಗ್ ಶೀಟ್, ಗೊಬ್ಬರ ಸಹಿತ ಮರು ನಾಟಿ ನಡೆಸಿಯೇ ಮಟ್ಟುಗುಳ್ಳ ಮತ್ತೆ ಬೆಳೆಯ ಬೇಕಾದ ದುಸ್ಥಿತಿಯನ್ನು ಎದುರಿಸುವಂತಾಗಿತ್ತು.
ಜಿಐ ಮಾನ್ಯತೆ : ಇಲ್ಲಿನ ಕೃಷಿಕರು ಭತ್ತದ ಬೆಳೆಯನ್ನು ಬೆಳೆಯುವ ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೈ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳ ಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮೃದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ( ಸ್ಟಿಕ್ಕರ್)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಳಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಮಟ್ಟುಗುಳ್ಳ ಸರಬರಾಜು ಮಾಡಲಾಗುತ್ತದೆ.
ಪ್ರಕೃತಿ ವಿಕೋಪದಿಂದಾಗಿ ಮಟ್ಟುಗುಳ್ಳ ಬೆಳೆಯು ಬಾಧಿತವಾಗಿದೆ. ನೆರೆ, ಚಂಡಮಾರುತ, ಉಪ್ಪು ನೀರಿನ ಬಾಧೆಯಿಂದ ದಿಕ್ಕು ತಪ್ಪಿದ ಮಟ್ಟುಗುಳ್ಳದ ಬೆಳೆಯಿಂದ ಬೆಳೆಗಾರರು, ಸಂಘವೂ ಬೆಳೆ ನಷ್ಟವನ್ನು ಅನುಭವಿಸುವಂತಾಗಿದೆ ಎನ್ನುತ್ತಾರೆ ಮಟ್ಟುಗುಳ್ಳ ಬೆಳೆಗಾರರ ಸಂಘ ಅಧ್ಯಕ್ಷ ಸುನಿಲ್ ಡಿ. ಬಂಗೇರ.
ಈ ಬಗ್ಗೆ ಮಾತನಾಡುವ ಮಟ್ಟುಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಲಕ್ಷ್ಮಣ ಮಟ್ಟು, ಅವಧಿ ಪೂರ್ವದಲ್ಲಿ ಮಟ್ಟುಗುಳ್ಳ ಮುಗಿದಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ ಫಸಲು ಇಲ್ಲ. ಕನಿಷ್ಠ 1 ತಿಂಗಳ ಫಸಲು ಮತ್ತು ಬೆಳೆಯು ನಷ್ಟವಾಗಿದೆ ಎನ್ನುತ್ತಾರೆ.