Advertisement

ನಾಳೆ ಗುಬ್ಬಿ-ಅರಣ್ಯ-ಜಲ ಸಂರಕ್ಷಣೆ ಜಾಗೃತಿಗಾಗಿ ಸೈಕ್ಲಿಂಗ್‌

04:40 PM Mar 22, 2022 | Shwetha M |

ವಿಜಯಪುರ: ವಿಶ್ವ ಗುಬ್ಬಚ್ಚಿ ದಿನಾಚರಣೆ(ಮಾ. 20), ವಿಶ್ವ ಅರಣ್ಯ ದಿನಾಚರಣೆ (ಮಾ. 22) ಹಾಗೂ ವಿಶ್ವ ಜಲ ದಿನಾಚರಣೆ (ಮಾ. 23) ಅಂಗವಾಗಿ ಪರ್ಯಾವರಣ ಸಂರಕ್ಷಣಾ ವೇದಿಕೆಯಿಂದ ಮಾ. 23ರಂದು ನಗರದಲ್ಲಿ ಬೃಹತ್‌ ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ.

Advertisement

ಪರಿಸರ ಸಂರಕ್ಷಣಾ ಗತಿವಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸೈಕಲ್‌ ಜಾಥಾ ಕುರಿತು ಸೋಮವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಬಸವರಾಜ ಬೈಜಚಬಾಳ ಹಾಗೂ ಸೈಕ್ಲಿಂಗ್‌ ಸಂಸ್ಥೆ ರಾಜ್ಯಾಧ್ಯಕ್ಷ ರಾಜು ಬಿರಾದಾರ, ವಿವಿಧ ಪರಿಸರ ಸಂರಕ್ಷಣೆ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

ಸೈಕಲ್‌ ಜಾಥಾದಲ್ಲಿ ಸುಮಾರು 500 ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಗರದ ಬಂಜಾರಾ ಕ್ರಾಸ್‌ನಲ್ಲಿ ಮಾ. 23ರಂದು ಬೆಳಗ್ಗೆ 6ಕ್ಕೆ ಚಾಲನೆ ದೊರೆಯಲಿದ್ದು, ಲಿಂಗದ ಗುಡಿ, ಸಿದ್ಧೇಶ್ವರ ಗುಡಿ, ಮಹಾತ್ಮಾ ಗಾಂಧೀಜಿ ವೃತ್ತ, ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ ಮಾರ್ಗವಾಗಿ ಐತಿಹಾಸಿಕ ಗಗನ ಮಹಲ್‌ ಬಂದು ತಲುಪಲಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಸುನೀಲಕುಮಾರ, ಜಿ.ಪಂ. ಸಿಇಒ ರಾಹುಲ್‌ ಸಿಂಧೆ, ಎಸ್ಪಿ ಆನಂದಕುಮಾರ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಪರಿಸರದ ವೈವಿಧ್ಯತೆ ಸಂರಕ್ಷಣೆ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪರಿಸರಕ್ಕೆ ಪೂರಕವಾಗಿರುವ ಸೈಕ್ಲಿಂಗ್‌ ಮೂಲಕವೇ ಜಾಗೃತಿಗೆ ಮುಂದಾಗಿದ್ದೇವೆ ಎಂದರು.

ಹೆಚ್ಚುತ್ತಿರುವ ಮರಗಳ ವಿನಾಶದಿಂದ ಶುದ್ಧ ಗಾಳಿಗೆ ಸಂಚಕಾರ ಬಂದಿದೆ. ಪಕ್ಷಿ ಸಂಕುಲಕ್ಕೆ ಅದರಲ್ಲೂ ಗುಬ್ಬಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ಮತ್ತೂಂದೆಡೆ ಜಲ ಮಾಲಿನ್ಯ, ಜಲಮೂಲಗಳ ವಿನಾಶದಿಂದಾಗಿ ಮನುಕುಲ ಮಾತ್ರವಲ್ಲ ಇಡೀ ಜೀವವೈವಿಧ್ಯಕ್ಕೆ ಅಪಾಯದ ದುಸ್ಥಿತಿಗೆ ತಲುಪಿದೆ. ಇದನ್ನು ತಡೆಯಲು ಜನರದಲ್ಲಿ ಜಾಗೃತಿ ಮೂಡಿಸಲು ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಪರಿಸರಕ್ಕೆ ಮಾರಕವಾಗಿರುವ ನಿಷೇಧಿತ ಪ್ಲಾಷ್ಟಿಕ್‌ ಬಳಕೆ ಮಾಡದತೆ, ಪರಿಸರ ಸ್ನೇಹಿ ಚೀಲಗಳನ್ನು ಮಾರುಕಟ್ಟೆಗೆ ನಾವೇ ಕೊಂಡೊಯ್ದು ವಸ್ತುಗಳನ್ನು ಖರೀದಿಸುವ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಪರಿಶುದ್ಧ ಗಾಳಿ ಮಾತ್ರವಲ್ಲ ಪರಿಸರ ಸಂರಕ್ಷಣೆಯ ಪಾಠ ಕಲಿತಿದ್ದೇವೆ. ಹೀಗಾಗಿ ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸುವ ಮಹತ್ವ, ಮನೆಗಳ ಛಾವಣಿ ಮೇಲೆ ಹಸಿರು ಮನೆಗಳ ನಿರ್ಮಾಣ ಹಾಗೂ ಮನೆಗಳಲ್ಲಿನ ತ್ಯಾಜ್ಯದ ನೀರಿನ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಮಳೆ ನೀರು ಕೊಯ್ಲು ಮೂಲಕ ಜಲ ಸಂರಕ್ಷಣೆ ಜೊತೆಗೆ ವಿದ್ಯುತ್‌ ಮಿತ ಬಳಕೆಯಿಂದ ಜಲ ಆಧಾರಿತ ವಿದ್ಯುತ್‌ ಉತ್ಪಾದನೆ ತಗ್ಗಸಿ ಹಾಗೂ ಸೌರ ವಿದ್ಯುತ್‌ ಬಳಕೆ ಮೂಲಕ ಪರಿಸರ ಸ್ನೇಹಿ ಇಂಧನ ಬಳಸುವ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಸಿದ್ದೇವೆ ಎಂದರು.

ಎಲ್ಲಕ್ಕಿಂತ ಮುಖ್ಯವಾಗಿ ಪರಿಸರದ ಎಲ್ಲ ವಿಭಾಗಕ್ಕೆ ಅಪಾಯ ತಂದೊಡ್ಡಿರುವ ಪ್ಲಾಸ್ಟಿಕ್‌ ಮರು ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಜನ ಸಮುದಾಯದ ಸಹಕಾರದಲ್ಲಿ ಅನುಷ್ಠಾನಕ್ಕೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

ಪರಿಸರ ಸಂರಕ್ಷಣೆ ಗತಿವಿ  ಸಂಸ್ಥೆಯ ವಿವಿಧ ವಿವಿಧ ವಿಭಾಗಗಳ ಪ್ರಮುಖರಾದ ಶಶಿಧರ ರೂಡಗಿ, ಪಲ್ಲವಿ ವಾಯದಂಡೆ, ಡಾ| ಬಾಬು ಸಜ್ಜನ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next