Advertisement

ಬೆಂಗಳೂರು ವಿದ್ಯಾರ್ಥಿಗಳಿಂದ ಕಾರ್ಗಿಲ್‌ಗೆ ಸೈಕಲ್‌ ಯಾತ್ರೆ !

07:28 AM Aug 03, 2023 | Team Udayavani |

ನವದೆಹಲಿ: ಇತ್ತೀಚೆಗೆ ನಡೆದ 24ನೇ ಕಾರ್ಗಿಲ್‌ ವಿಜಯ ದಿವಸದಂದು ದೇಶದ ವಿವಿಧೆಡೆ ಕಾರ್ಗಿಲ್‌ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಗಿದೆ. ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರು ಈ ಗೌರವಾರ್ಪಣೆಯನ್ನು ವಿಶಿಷ್ಟಗೊಳಿಸಿದ್ದಾರೆ. ಬೆಂಗಳೂರಿನಿಂದ ಕಾರ್ಗಿಲ್‌ವರೆಗೆ ಬರೋಬ್ಬರಿ 3,200 ಕಿ.ಮೀ.ಗಳ ದೂರವನ್ನು ಸೈಕಲ್‌ ಮೂಲಕ ಕ್ರಮಿಸಿ ಕಾರ್ಗಿಲ್‌ ವೀರ ಕಲಿಗಳಿಗೆ ನಮಿಸಿದ್ದಾರೆ.

Advertisement

ರಾಮಯ್ಯ ಕಾಲೇಜಿನ ಬಿಬಿಎ ವಿದ್ಯಾರ್ಥಿ ಎ.ಕೃಷ್ಣನ್‌ ಹಾಗೂ ಸಂತ ಜೋಸೆಫ್ ಯೂನಿವರ್ಸಿಟಿಯ ಬಿ.ಕಾಮ್‌ ವಿದ್ಯಾರ್ಥಿ ಸಾಯಿ ಕೌಶಿಕ್‌ ಈ ಸೈಕಲ್‌ ಯಾನವನ್ನು ನಡೆಸಿದ್ದಾರೆ. ಮುಂಗಾರು ಹವಾಮಾನದ ನಡುವೆಯೂ ಟೈಫಾಯ್ಡ ಜ್ವರದಿಂದ ತತ್ತರಿಸಿದರೂ 60 ದಿನಗಳ ಸುದೀರ್ಘ‌ ಪಯಣವನ್ನು ಪೂರೈಸಿದ ಈ ಇಬ್ಬರು ಯುವಕರು ಮಾರ್ಗಮಧ್ಯೆ ಕಾರ್ಗಿಲ್‌ ಯೋಧರ ಶೌರ್ಯ, ಸಾಹಸಗಳನ್ನು ತಿಳಿಸುವ ಸಲುವಾಗಿ (ಎನ್‌ಸಿಸಿ) ಘಟಕಗಳಿಗೂ ಭೇಟಿ ನೀಡಿದ್ದಾರೆ.

ಮೇ ತಿಂಗಳಲ್ಲಿ ಶುರು ಮಾಡಿದ ಪ್ರಯಾಣವು ಕನ್ಯಾಕುಮಾರಿ-ಶ್ರೀನಗರ ಹೆದ್ದಾರಿ ಮಾರ್ಗವಾಗಿ ಸಾಗಿದ್ದು, ಮುಂಗಾರು ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸಬಹುದೆಂದು ಅಂದಾಜಿಸಿದ್ದರು. ಆದರೆ, ಮಾರ್ಗಮಧ್ಯೆಯ ಅಪಘಾತ, ಜ್ವರ, ಪ್ರವಾಹ ಪರಿಸ್ಥಿತಿಗಳಿಂದ ಎದುರಾದ ಸಂಚಾರ ಅಡೆತಡೆ ಎಲ್ಲವನ್ನೂ ಮೀರಿ ಸುದೀರ್ಘ‌ 2 ತಿಂಗಳ ಪಯಣದ ಬಳಿಕ ಜುಲೈ 24ರಂದು ಕಾರ್ಗಿಲ್‌ ಹುತಾತ್ಮರ ಸ್ಮಾರಕ ತಲುಪಿದೆವು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಪ್ರಾಣತ್ಯಾಗ ಮರೆತಿದ್ದೇ ವಿಪರ್ಯಾಸ
ಹೊಸವರ್ಷದಂದು ನಾನೊಂದು ಪುಸಕ್ತ ಓದುತ್ತಿದ್ದೆ, ಅದು ಕ್ಯಾಪ್ಟನ್‌ ವೈಜಯಂತ್‌ ಥಾಪರ್‌ ಅವರ ಬಗ್ಗೆ. ಅವರ ಶೌರ್ಯ, ಸಾಹಸಕ್ಕೆ ಭಾರತ ಸರ್ಕಾರ ವೀರಚಕ್ರವನ್ನೂ ಪ್ರದಾನಿಸಿದೆ. ಇದೇ ರೀತಿ ಶೌರ್ಯಪದಕ ಪಡೆದ 5 ಯೋಧರ ಹೆಸರನ್ನು ಹೇಳುವಿರಾ ಎಂದಾಗ ನನ್ನ ಕುಟುಂಬದ ಯಾರಿಗೂ ಆ ಬಗ್ಗೆ ತಿಳಿದಿರಲಿಲ್ಲ. ನನ್ನ ಸ್ನೇಹಿತರಿಗೂ ಕೂಡ.. ನಮಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ನಾವು ಮರೆತಿರುವುದು ವಿಪರ್ಯಾಸ..ಅದಕ್ಕಾಗಿ ಅಂದು ಬರೀ 1 ಅಥವಾ 2 ದಿನದ ಆಚರಣೆಗೆ ಬಲಿದಾನ ಮೀಸಲಾಗದೇ ಎಲ್ಲರಿಗೂ ಈ ತ್ಯಾಗ ತಿಳಿಯಬೇಕೆಂದು ನಿರ್ಧರಿಸಿದೆ. ಹಾಗಾಗಿ ಈ ಯಾನ ಕೈಗೊಂಡು ಸಾಧ್ಯವಾದಷ್ಟು ಕಾರ್ಗಿಲ್‌ ಯೋಧರ ಬಗ್ಗೆ ಜನರಿಗೆ ತಿಳಿಸಿದ್ದೇವೆ ಎಂದು ಕೃಷ್ಣನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next