Advertisement

ನಮ್ಮ ಮನೆಗೆ ಸೈಕಲ್‌ ಬಂತು !

03:45 AM Apr 21, 2017 | |

ಜೀವನ ರೈಲಿನ ಹಾಗೆ ವೇಗವಾಗಿ ಮುಂದೆ ಓಡುತ್ತಿದ್ದರೂ ನೆನಪುಗಳು ಮಾತ್ರ ಹಿಂದಿನ ಸ್ಟೇಷನ್‌ ತರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿರುತ್ತವೆ. ಕಳೆದ ತಿಂಗಳ ಯುಗಾದಿ ಹಬ್ಬದಂದು ಮನೆಗೆ ಹೊಸ ಸದಸ್ಯನ ಆಗಮನ ಆಯಿತು. ಅದು ಹೋಂಡಾ ಸ್ಕೂಟರ್‌ (ದ್ವಿಚಕ್ರ ವಾಹನ)ನ ಆಗಮನ, ಮನೆಯಲ್ಲಿ ಸಡಗರ ಸಂಭ್ರಮ ಸೃಷ್ಟಿ ಮಾಡಿತ್ತು.
 
ನನಗೆ ಪರೀಕ್ಷೆ ಇದ್ದ ಕಾರಣ ಹಬ್ಬದಂದು ಊರಿಗೆ ತೆರಳಲು ಅವಕಾಶ ಸಿಕ್ಕಿರಲಿಲ್ಲ. ಸ್ವಲ್ಪ ದಿನಗಳ ನಂತರ ಊರಿಗೆ ಹೋದೆ. ಆಗ ಖುಷಿಯ ಜೊತೆಗೆ ದುಃಖವೇ ಜಾಸ್ತಿಯಾಯಿತು. ಹಿಂದೆ ಹಿರಿಯರು ಕೆಲವು ಗಾದೆಗಳನ್ನು ಹೇಳುತ್ತಿದ್ದರು. “ಹೊಸ ನೀರು ಬಂದಾಗ ಹಳೆ ನೀರು ಮರೆಯಬಾರದು’, “ಏರಿದ ಏಣಿ ಯಾವತ್ತೂ ಒದೆಯಬಾರ’ದೆಂದು. ಆದರೆ, ಸ್ಕೂಟರ್‌ ಬಂದ ಮೇಲೆ ಮನೆಯಲ್ಲಿದ್ದ ಅಪ್ಪನ ಸುಮಾರು ಹದಿನಾರು ವರ್ಷದ ಸೈಕಲನ್ನು ಗುಜರಿಗೆ ಹಾಕಿದ್ದರು. ಅದು ನಮ್ಮನ್ನು ಎಷ್ಟು ಆರೈಕೆ ಮಾಡುತ್ತಿತ್ತು, ಅಂದರೆ ಅಪ್ಪ , ನನ್ನ ತಂಗಿಯನ್ನು ದಿನಾಲು ಶಾಲೆಗೆ ಕಳಿಸುತ್ತಿದ್ದುದು ಅದರಲ್ಲಿಯೇ. ಜಾತ್ರೆ, ಉತ್ಸವ, ಮದುವೆ ಹೀಗೆ ಏನಾದರೂ ಕಾರ್ಯಕ್ರಮ ಇರಲಿ, ನಮ್ಮನ್ನು ಹೊತ್ತು ಒಯ್ಯುತಿತ್ತು.
 
ನಾನು ಅದನ್ನು ಓಡಿಸಲು ಕಲಿಯುವಾಗ ಮೈಮೇಲೆ ಹಾಕಿಕೊಂಡು ಬಿದ್ದು ನನ್ನ ಜೊತೆ ಅದಕ್ಕೂ ಎಷ್ಟೊಂದು ಪೆಟ್ಟು ಮಾಡಿಕೊಂಡಿದ್ದೆ. ಗೆಳೆಯ ರಮೇಶನನ್ನು ಕುಳ್ಳಿರಿಸಿಕೊಂಡು ನನ್ನ ತರಗತಿ ಹುಡುಗಿಯರ ಮುಂದೆ ಸ್ಟೈಲಾಗಿ ಹೋಗುವಾಗ ಶಾಲೆಯ ರಸ್ತೆ ಪಕ್ಕದ ಕೆಸರಿನ ಗುಂಡಿಯಲ್ಲಿ ಬಿದ್ದದ್ದನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ. ಜಾತ್ರೆ, ಹಬ್ಬ, ಹರಿದಿನ ಬಂದರೆ ಸಾಕು ಅದಕ್ಕೂ ಕ್ಲಿನಿಕ್‌ ಪ್ಲಸ್‌ ಶಾಂಪೂವಿನ ಸ್ನಾನ, ಹೊಸ ಸೀಟು, ರಿಬ್ಬನ್‌, ಪ್ಲಾಸ್ಟಿಕ್‌ ಹೂಗಳಿಂದ ಮದುಮಗನಂತೆ ರಾರಾಜಿಸುತ್ತಿತ್ತು.

Advertisement

ಆ ಸಮಯದಲ್ಲಿ ನಾನಾ ಬಗೆಯ ನಾದಸ್ವರ ಮಾಡುವ ಗಂಟೆ ಬಂದಿತ್ತು. ಶಾಲೆಯ ಮುಖ್ಯ ರಸ್ತೆಯಲ್ಲಿ ಅದನ್ನು ಸೌಂಡ್‌ ಮಾಡುತ್ತ ಹೊರಟರೆ ನಮ್ಮ ಸೈಕಲ್‌ ಗಮತ್ತೇ ಬೇರೆ. ಎಲ್ಲರೂ ತಿರುಗಿ ನಮ್ಮತ್ತ ನೋಡುವರು, ಕೆಲವರು ಅದರ ಕಿರಿಕಿರಿ ಸೌಂಡ್‌ಗೆ ಬೈಯುವುದುಂಟು. ಅದನ್ನು ತರಲು ಅಪ್ಪನ ಕಿಸೆಯಿಂದ 30 ರೂಪಾಯಿ ಕಳ್ಳತನ ಮಾಡಿ ಅವರಿಂದ ಒದೆಗಳನ್ನು ತಿಂದಿದ್ದೆ.  ಸ್ನೇಹಿತರ ಜೊತೆ ಸೇರಿಕೊಂಡು ಊರ ಹೊರಗಿನ ತೋಟಗಳಿಗೆ ನುಗ್ಗಿ ಮಾವು, ಸೀಬೆಕಾಯಿ, ದಾಳಿಂಬೆ ಕದ್ದು ಓಡಿ ಬರಲು ಅದು ನಮ್ಮ ಸಹಾಯಕ. ನಮ್ಮ ಹಳ್ಳಿಯ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ನಾಟಕ, ದೊಡ್ಡಾಟ ಅದರಲ್ಲೂ ನಮಗೆ ಕಬಡ್ಡಿ ಅಂದರೆ ಬಲು ಪಂಚಪ್ರಾಣ. ಎಲ್ಲಿಯಾದರೂ ಸರಿ, ಅಪ್ಪನ ಕಣ್ಣು ತಪ್ಪಿಸಿ ಓಡುತ್ತಿದ್ದವು. ಗೆಳತಿ ಶಾಲಿನಿ ಜೊತೆ ಪ್ರತಿವಾರ ಊರ ಹೊರಗಿನ ಮಾರುತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಆ ಕ್ಷಣ ಅದ್ಭುತವಾದದ್ದು. ಅಷ್ಟೇ ಅಲ್ಲದೇ ತಗ್ಗು, ದಿಬ್ಬ ಅನ್ನದೇ ಸತತ ಎರಡು ವರ್ಷ ನನ್ನ ಜೊತೆ ದಿನಪತ್ರಿಕೆ ಹಂಚಿತು. ಹೀಗೆ ಅನೇಕ ರೀತಿಯಲ್ಲಿ ನನ್ನ ಸಂಗಡಿಗನಾಗಿ ಇದ್ದ ಆ ಮಧುರ ಕ್ಷಣಗಳು ಇಂದು ಕೇವಲ ನೆನಪುಗಳಾಗಿ ಉಳಿದಿವೆ.

– ಲೋಕನಗೌಡ ದ್ಯಾಮನಗೌಡ್ರ
ಪತ್ರಿಕೋದ್ಯಮ ವಿದ್ಯಾರ್ಥಿ
ಮುಂಡರಗಿ

Advertisement

Udayavani is now on Telegram. Click here to join our channel and stay updated with the latest news.

Next