Advertisement

ಸೈಕಲ್‌ ರಿಕ್ಷಾವೇರಿ ಪರಿಸರ ರಕ್ಷಣೆಗೆ ಹೊರಟ ಯುವಪಡೆ

11:35 AM Jan 23, 2018 | |

ಉಡುಪಿ: ಓಡಾಡುವುದಕ್ಕೆ ಸೈಕಲ್‌ ರಿಕ್ಷಾ, ಅದರೊಳಗೆ ಬೀಜದುಂಡೆ, ಗಿಡ, ಮೈಕ್‌ ಸಿಸ್ಟಂ, ಕರಪತ್ರ… ಸೈಕಲ್‌ ರಿಕ್ಷಾ
ಏರಿ ಊರೂರು ಓಡಾಡುತ್ತಿರುವ ಈ ಯುವಕರದ್ದು ಪರಿಸರ ರಕ್ಷಣೆ, ಜಾಗೃತಿಯ ಕಾಯಕ. ವಿನಯಚಂದ್ರ ಸಾಸ್ತಾನ ಮತ್ತು
ಅವರ ಕೆಲವು ಗೆಳೆಯರಿಗೆ ರವಿವಾರ ಬಂತೆಂದರೆ ಖುಷಿ. ಅದು ರಜಾದ ಮಜಾ ಅನುಭವಿಸುವ ಖುಷಿಯಲ್ಲ. ಬದಲಾಗಿ ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವ ಸಂತೋಷ. ಒಂದು ತಿಂಗಳ ಹಿಂದೆ ಆರಂಭಿಸಿದ ಈ “ಹಸುರು ಅಭಿಯಾನ’ ಈಗ ಉಡುಪಿ ಜಿಲ್ಲೆಯ ಊರೂರು ತಲುಪುತ್ತಿದೆ. 

Advertisement

ಅತ್ತ ಹೆಜಮಾಡಿಯಿಂದ ಇತ್ತ ಶೀರೂರು ಗಡಿಭಾಗದವರೆಗೂ ಗ್ರಾಮ ಗ್ರಾಮಗಳಿಗೆ ತೆರಳಿ ಗಿಡ, ಬೀಜದುಂಡೆ, ಕರಪತ್ರ ವಿತರಿಸಿ ಮೈಕ್‌ನಲ್ಲಿ ಪರಿಸರ ಜಾಗೃತಿಯ ಸಂದೇಶ ನೀಡುತ್ತಾ ಸಾಗಲಿದೆ. ಈಗಾಗಲೇ ಉಡುಪಿ ನಗರ ಮತ್ತು ಸುತ್ತಮುತ್ತ ಅಭಿಯಾನ ನಡೆಸಿರುವ ತಂಡ ಈಗ ಬ್ರಹ್ಮಾವರ ತಲುಪಿದೆ. ಮುಂದಿನ ರವಿವಾರ ಮಾಬುಕಳ, ಹಂಗಾರಕಟ್ಟೆ ಪ್ರವೇಶಿಸಲಿದೆ. ಮುಂದೆ ಶೀರೂರು ತಲುಪಿ ಅಲ್ಲಿಂದ ಮತ್ತೆ ಕಾರ್ಕಳ, ಹೆಜಮಾಡಿ ಕಡೆಗೆ ಪಯಣ ಬೆಳೆಸಲಿದೆ.

ಆಯುರ್ವೇದ ಗಿಡಗಳಿಗೆ ಆದ್ಯತೆ
ವೀಡಿಯೋ ಎಡಿಟಿಂಗ್‌ ಉದ್ಯೋಗ ಮಾಡುವ ವಿನಯಚಂದ್ರ ಈ ಅಭಿಯಾನದ ರೂವಾರಿ. ಇವರ ಜತೆಗೆ ತಾರಾನಾಥ ಮೇಸ್ತ, ಶೇಷಗಿರಿ, ದಿನೇಶ್‌ ಅವರು ಕೂಡ ಸೇರಿಕೊಂಡಿದ್ದಾರೆ.  ಸಾಸ್ತಾನ ಮಿತ್ರರು, ಗೀತಾನಂದ ಫೌಂಡೇಷನ್‌ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಇವರ ಬೆನ್ನಿಗೆ ನಿಂತು ಸಹಾಯ ಮಾಡುತ್ತಿದೆ. ಈಗಾಗಲೇ ಶ್ರೀಗಂಧ, ಬಿಲ್ವಪತ್ರೆ, ತೇಗ, ಪುನರ್ಪುಳಿ ಸೇರಿದಂತೆ 15,000ಕ್ಕೂ ಅಧಿಕ ಗಿಡಗಳನ್ನು, 10,000 ಬೀಜದುಂಡೆ (ಸೀಡ್‌ಬಾಲ್‌)ಗಳನ್ನು ವಿತರಿಸಿರುವ ಈ ತಂಡದ ಸದಸ್ಯರು ಸ್ವತಃ ತಾವೇ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.

ಅಭಿಯಾನದಲ್ಲಿ ಹಣ್ಣಿನ ಗಿಡವಾದ ಲಕ್ಷ್ಮಣ ಫ‌ಲ, ಆಯುರ್ವೇದ ಗಿಡಗಳಾದ ಲಕ್ಷ್ಮೀತರು, ಶಿವಾನಿ ಮೊದಲಾದ ಬೀಜಗಳನ್ನೊಳಗೊಂಡ ಉಂಡೆಗಳನ್ನು ಇದುವರೆಗೆ 1,700ಕ್ಕೂ ಅಧಿಕ ಸಂಖ್ಯೆಯಲ್ಲಿ ವಿತರಿಸಲಾಗಿದೆ. ಕಾಡಿನಲ್ಲಿ ಬಿತ್ತನೆ ಮಾಡುವ ಉದ್ದೇಶದಿಂದ ಕದಂಬ, ಬೀಟೆ ಮೊದಲಾದವುಗಳ ಬೀಜದುಂಡೆ ಮಾಡುವ ಯೋಜನೆಯನ್ನು ಈ ತಂಡ ಹಾಕಿಕೊಂಡಿದೆ. ಗಿಡಗಳ ಉಪಯೋಗದ ಕುರಿತಾಗಿ ಅಧ್ಯಯನ ಮಾಡುವ ಕಾರ್ಯ ಕೂಡ ಈ ತಂಡ ಮಾಡುತ್ತಿದೆ. ಅಂದಹಾಗೆ, ಬೀಜದುಂಡೆಯನ್ನು ಕೂಡ ಯುವಕರ ತಂಡವೇ ಸಾಸ್ತಾನದಲ್ಲಿ ಗೆಳೆಯರ ಸಹಕಾರದೊಂದಿಗೆ ಸಿದ್ಧಪಡಿಸುತ್ತದೆ. ಯಾರಾದರೂ ಬೀಜದುಂಡೆ, ಗಿಡಗಳನ್ನು ನೀಡಿದರೆ ಅದನ್ನು ಕೂಡ ಸ್ವೀಕರಿಸುತ್ತದೆ.

ಗೀತಾನಂದ ಫೌಂಡೇಶನ್‌ 2,000ದಷ್ಟು, ಅರಣ್ಯ ಇಲಾಖೆ 1,500 ಗಿಡಗಳನ್ನು ನೀಡಿದೆ. ಯುವಕರ ಉತ್ಸಾಹ ಕಂಡು ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಅವರು ಹೊಸದಿಲ್ಲಿಯಿಂದ ರಿಕ್ಷಾ ಸೈಕಲ್‌ನ್ನು ತರಿಸಿಕೊಟ್ಟಿದ್ದಾರೆ. ಮೈಕ್‌ನಲ್ಲಿ ಆರ್‌ಜೆ ನೈನಾ ಅವರ ದನಿಯಲ್ಲಿ ಪರಿಸರ ಜಾಗೃತಿಯ ಸಂದೇಶಗಳು ಹೊರಹೊಮ್ಮುತ್ತವೆ. ಪರಿಸರ ಸಂರಕ್ಷಣೆ, ಸ್ವಚ್ಛತೆಯ ಜತೆಗೆ ಇತರ ಸಮಾಜಮುಖೀ ಕಾರ್ಯದಲ್ಲಿಯೂ ಈ ತಂಡ ತೊಡಗಿಸಿಕೊಂಡಿದೆ. ಪ್ರಾಣಿಗಳ ರಕ್ಷಣೆಯ ನಿಟ್ಟಿನಲ್ಲಿ ಈ ಹಿಂದೆ “ಮೂಕ ಸ್ಪಂದನೆ’ ಕಾರ್ಯಕ್ರಮ ಆಯೋಜಿಸಿತ್ತು. ಪ್ರಾಣಿಗಳಿಗೆ ನೀರು ನೀಡಿ ಅದರ ಫೋಟೋವನ್ನು ಕಳುಹಿಸಿಕೊಡುವ ಅಭಿಯಾನ ಇದಾಗಿತ್ತು. ಕಳೆದ ವರ್ಷ “ಸೆಲ್ಫಿ ವಿತ್‌ ಗ್ರೀನ್‌’ ಎಂಬ ವಿಷಯವಾಗಿ ಗಿಡ ನೆಟ್ಟು ಅದರೊಂದಿಗೆ ಸೆಲ್ಫಿ ತೆಗೆದು ಕಳುಹಿಸುವ ಅಭಿಯಾನ ನಡೆಸಿತ್ತು. ಅದಕ್ಕೂ 2,000ದಷ್ಟು ಫ‌ೊಟೋಗಳು ಬಂದಿದ್ದವು. ಸುಮಾರು 450ರಷ್ಟು ಬೀದಿನಾಯಿಗಳಿಗೆ ಪ್ರತಿಫ‌ಲನ ಬೆಲ್ಟ್ ಅಳವಡಿಸುವ ಕಾರ್ಯವನ್ನು ಕೂಡ ನಡೆಸಿದೆ. ಈ  ತಂಡದಲ್ಲಿರುವ ಯುವಕರ್ಯಾರು ಕೂಡ ದೊಡ್ಡ ದೊಡ್ಡ ಉದ್ಯೋಗ, ವ್ಯವಹಾರ ಮಾಡಿಕೊಂಡವರಲ್ಲ. ಆದಾಗ್ಯೂ ಪ್ರತಿ ರವಿವಾರ ಪರಿಸರ, ಸಮಾಜಕ್ಕಾಗಿ ತಮ್ಮ ಬಿಡುವನ್ನು ಮೀಸಲಿಟ್ಟಿದ್ದಾರೆ. 

Advertisement

ಪರಿಸರ ಸಂದೇಶ 
ಹುಟ್ಟುಹಬ್ಬ, ಇತರ ವಿಶೇಷ ದಿನದಂದು ಗಿಡನೀಡುವ, ನೆಡುವ, ನೀರೆರೆದು ಪೋಷಿಸುವ ಕಾರ್ಯ ಮಾಡಿ 

· ಸ್ಥಳೀಯ ಯೋಜನೆಗಳ ಬಗ್ಗೆ ಜಾಗೃತರಾಗಿರಿ. ಅಗತ್ಯ ಬಿದ್ದರೆ ಪರಿಸರ ಸಂರಕ್ಷಣೆಗಾಗಿ ಹೋರಾಡಿ

· ನಿಮ್ಮ ಜನಪ್ರತಿನಿಧಿಗಳನ್ನು ಪರಿಸರ ಪ್ರೇಮಿಗಳಾಗಲು ಪ್ರೇರೇಪಿಸಿ

· ಸಾಧ್ಯವಾದಷ್ಟು ಶ್ರೀಸಾಮಾನ್ಯನ ವಾಹನವಾದ ಸೈಕಲ್‌ ಬಳಸಿ 

· ಬಟ್ಟೆ ಚೀಲ ಬಳಸಿ. ಪ್ಲಾಸ್ಟಿಕ್‌ ಉಪಯೋಗ ನಿಲ್ಲಿಸಿ.
· ಟಿ.ವಿ., ಕಂಪ್ಯೂಟರ್‌ ದಾಸರಾಗದೆ ಪ್ರಕೃತಿಯ ಜತೆಗೂ ಕಾಲ ಕಳೆಯಿರಿ.

ರವಿವಾರ ಸಮಾಜಕ್ಕೆ ಮೀಸಲು
ಪರಿಸರಕ್ಕಾಗಿ ನಾವು ಏನಾದರೂ ಮಾಡಲೇ ಬೇಕು ಎಂಬ ನಿರ್ಧಾರ ನಮ್ಮದಾಗಿತ್ತು. ಅದಕ್ಕಾಗಿ ಇತರ ಸಾಮಾಜಿಕ ಕಾರ್ಯಗಳೊಡನೆ ಪರಿಸರ ಸಂರಕ್ಷಣೆಗಾಗಿ ದುಡಿಯುತ್ತಿದ್ದೇವೆ. ಹೆಚ್ಚು ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇವೆ. ನಮಗೆ ಹಲವಾರು ಮಂದಿ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ಪ್ರತಿ ರವಿವಾರ ಕೂಡ ಸಮಾಜಕ್ಕೆ, ಪರಿಸರಕ್ಕೆ ಮೀಸಲು. ಇನ್ನೂ 3 ತಿಂಗಳುಗಳ ಕಾಲ ಈ ಸೈಕಲ್‌ ರಿಕ್ಷಾ ಅಭಿಯಾನ ಮುಂದುವರೆಯಲಿದೆ.
ವಿನಯಚಂದ್ರ ಸಾಸ್ತಾನ, ಹಸಿರು ಅಭಿಯಾನದ ರೂವಾರಿ

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next