Advertisement

ಸೈಬರ್‌ ಅಪರಾಧಗಳ ನಿಗ್ರಹ: ಬ್ಯಾಂಕರ್‌ಗಳ ಸಭೆ

11:57 PM Nov 05, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ದಿನೇದಿನೆ ಅಧಿಕ ವಾಗುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಎಲ್ಲ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ(ಸಿಇಓ)ಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು.

Advertisement

ಸೈಬರ್‌ ಅಪರಾಧ ಪ್ರಕರಣಗಳು ನಾನಾ ರೀತಿಯಲ್ಲಿ ನಡೆಯುತ್ತವೆ. ಪ್ರಮುಖವಾಗಿ ಇಂಟರ್‌ನೆಟ್‌ ಬ್ಯಾಂಕಿಂಗ್‌, ಸಾಮಾಜಿಕ ಜಾಲತಾಣ ಗಳ ಮೂಲಕ ವಂಚನೆಗಳು ನಡೆಯು ತ್ತಿವೆ. ಹೀಗಾಗಿ, ಎಲ್ಲ ಬ್ಯಾಂಕ್‌ಗಳ ಸಿಇಓಗಳ ಜತೆ ಸಭೆ ನಡೆಸಿ, ಗ್ರಾಹಕರ ದತ್ತಾಂಶಗಳಿಗೆ ಯಾವ ರೀತಿ ಭದ್ರತೆ ಒದಗಿಸಿದ್ದಿರಿ?

ವಂಚಕರು ಹೇಗೆ ಡೇಟಾಗಳನ್ನು ಕಳವು ಮಾಡುತ್ತಾರೆ? ಅವುಗಳ ಭದ್ರತೆ ಹೇಗೆ? ಎಂಬುದರ ಕುರಿತು ಸಭೆ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಕ್ರಮಕ್ಕೆ ಸೂಚಿಸುತ್ತೇವೆ. ಇದರೊಂದಿಗೆ ಬ್ಯಾಂಕಿಂಗ್‌ ಸಾಫ್ಟ್ವೇರ್‌ಗಳನ್ನು ಸಿದ್ದಪಡಿಸುವ ಸಾಫ್ಟ್ವೇರ್‌ ಕಂಪನಿ ಅಧಿಕಾರಿಗಳ ಜತೆಯೂ ಸಭೆ ನಡೆಸಲು ನಿರ್ಧರಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಐಟಿ ಕಾಯ್ದೆ ಗಟ್ಟಿಗೊಳಿಸುತ್ತೇವೆ: ಕೇವಲ ಆರ್ಥಿಕ ಅಪರಾಧ ಮಾತ್ರವಲ್ಲ. ಭಯೋತಾ#ದನೆ ಚಟುವಟಿಕೆಗಳನ್ನು ಕೆಲ ಶಂಕಿತ ವ್ಯಕ್ತಿಗಳು ಸೈಬರ್‌ ಮೂಲಕವೇ ನಡೆಸುತ್ತಾರೆ. ಆದರೆ, ಭದ್ರತೆ ದೃಷ್ಟಿಯಿಂದ ಸೂಕ್ಷ್ಮ ವಿಚಾರಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಪ್ರಸ್ತುತ ಐಟಿ ಕಾಯ್ದೆ ಅಡಿಯಲ್ಲಿಯೇ ಎಲ್ಲ ರೀತಿಯ ಸೈಬರ್‌ ಅಪರಾಧ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ, ಐಟಿ ಕಾಯ್ದೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ನುರಿತ ಕಾನೂನು ತಜ್ಞರ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

3 ವರ್ಷದಲ್ಲಿ 16 ಸಾವಿರ ಸಿಬ್ಬಂದಿ ನೇಮಕ: ಪೊಲೀಸ್‌ ಇಲಾಖೆಯ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ಮೂರು ವರ್ಷದಲ್ಲಿ 16 ಸಾವಿರ ಪೊಲೀಸ್‌ ಸಿಬ್ಬಂದಿ, ಅಧಿಕಾರಿಗಳ ನೇಮಕ ಮಾಡಿಕೊಳ್ಳುತ್ತೇವೆ. ಈಗಾಗಲೇ 6,500 ಕಾನ್‌ಸ್ಟೆàಬಲ್‌ ನೇಮಕ ಮಾಡಿಕೊಂಡಿದ್ದೇವೆ. ಒಂದು ಸಾವಿರ ಇನ್‌ಸ್ಪೆಕ್ಟರ್‌ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.

Advertisement

ಔರಾದ್ಕರ್‌ ವರದಿಯಲ್ಲಿ ಗೊಂದಲವಿಲ್ಲ: ಪೊಲೀಸ್‌ ಸಿಬ್ಬಂದಿಯ ವೇತನ ಪರಿಷ್ಕರಣೆ ಕುರಿತು ಎಡಿಜಿಪಿ ಔರಾದ್ಕರ್‌ ವರದಿ ಜಾರಿಗೊಳಿಸುವಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಬೇರೆ ಇಲಾಖೆಗಳಲ್ಲಿ ಸಮಾನಾಂತರ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಸಿಗುವ ಸಂಬಳವನ್ನು ಪೊಲೀಸರಿಗೂ ನೀಡುವಂತೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮೂಲ ವೇತನದಲ್ಲಿ ಇರುವ ತಾರತಮ್ಯವನ್ನು ಸರಿಪಡಿಸಲು ವರದಿಯಲ್ಲಿ ಸೂಚಿಸಲಾಗಿದೆ. ಅದರಂತೆ ಹಣಕಾಸು ಇಲಾಖೆ ನೀಡಿರುವ ಮಾಹಿತಿ ಆಧಾರದಲ್ಲಿ ವರದಿ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಮಾನಾಂತರ ಸಂಬಳ ಪಡೆಯುತ್ತಿರುವ ಸಿಬ್ಬಂದಿಗೆ ಬಡ್ತಿ ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಇದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಕರಣ ದಾಖಲು ಕಡ್ಡಾಯ: ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂಬ ಗಂಭೀರ ಆರೋಪವಿದೆ. ಹೀಗಾಗಿ, ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ಪ್ರಕರಣಗಳ ದಾಖಲು ಕಡಿಮೆ ಮಾಡುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂಬ ಭಾವನೆಯನ್ನು ಕೈಬಿಡಿ.

ಯಾರೇ ದೂರು ನೀಡಿದರೂ ಕಡ್ಡಾಯವಾಗಿ ಮೊದಲು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದೇವೆ. ಜತೆಗೆ ಅಪರಾಧ ಪತ್ತೆ, ಆರೋಪ ಪಟ್ಟಿಯನ್ನು ನಿರ್ದಿಷ್ಟ ಅವಧಿಯಲ್ಲಿ ಮಾಡಬೇಕು. ಅಭಿಯೋಜನಾ ಇಲಾಖೆ (ಪ್ರಾಸಿಕ್ಯೂಷನ್‌) ಜತೆ ಉತ್ತಮ ಸಮನ್ವಯತೆ ಹೊಂದಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದರು.

ಪೊಲೀಸ್‌ ಸೌಕರ್ಯ ಹೆಚ್ಚಳ: ರಾಜ್ಯದ ಪೊಲೀಸರ ಜೀವನ ಮಟ್ಟ ಸುಧಾರಿಸಲು ಹಾಗೂ ಉತ್ತಮ ವಾತಾವರಣ ನಿರ್ಮಿಸಲು ಇಲಾಖೆಯ ಶೇಕಡಾ 80ರಷ್ಟು ಸಿಬ್ಬಂದಿಗೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಈಗಾಗಲೇ, ಶೇ.60ರಷ್ಟು ಸಿಬ್ಬಂದಿಗೆ ಪೊಲೀಸ್‌ ವಸತಿ ಗೃಹ ನಿರ್ಮಿಸಿಕೊಡಲಾಗಿದೆ. ಅದನ್ನು ಶೇ.80ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

ಪೊಲೀಸರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಭಾಗ್ಯ ಯೋಜನೆಯ ಸೌಲಭ್ಯ ಒದಗಿಸಲು, ಅವರ ಮಕ್ಕಳಿಗೆ ಶಿಕ್ಷಣದಲ್ಲಿ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹಳೆಯ ಪೊಲೀಸ್‌ ಸ್ಟೇಷನ್‌ಗಳ ನವೀಕರಣ ಹಾಗೂ ಪುನರ್‌ ನಿರ್ಮಾಣ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು. ಪೊಲೀಸ್‌ ವಾಹನ, ಶಸ್ತ್ರಾಸ್ತ್ರ ಸೇರಿದಂತೆ ಪೊಲೀಸರಿಗೆ ಅಗತ್ಯವಿರುವ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆ ಅಭಿವೃದ್ಧಿಗೆ 3 ಸೂತ್ರ: ರಾಜ್ಯ ಪೊಲೀಸ್‌ ಇಲಾಖೆಗೆ ದೇಶ-ವಿದೇಶದಲ್ಲಿ ಉತ್ತಮ ಹೆಸರಿದೆ. ಹೀಗಾಗಿ, ಈ ಸದೃಢ ಇಲಾಖೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಮೂರು ಸೂತ್ರಗಳನ್ನು ಸಿದ್ದಪಡಿಸಿಕೊಂಡಿದ್ದೇನೆ.

-ಮೊದಲನೇಯದಾಗಿ, ಪೊಲೀಸ್‌ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳ ವ್ಯಕ್ತಿಗತ ಸ್ಥಿತಿಗತಿಗಳು, ಅವರ ಸೇವಾ ಸ್ಥಿತಿಗತಿ ಉತ್ತಮ ಪಡಿಸಬೇಕು.

-ನೊಂದ ಸಾರ್ವಜನಿಕರು ದೂರು ನೀಡಲು ಬರುವ ಪೊಲೀಸ್‌ ಠಾಣೆಗಳಲ್ಲಿ ಉತ್ತಮ ವಾತಾವರಣ ಸೃಷ್ಟಿಸಬೇಕು.

-ಜನರಿಗಾಗಿ ಪೊಲೀಸರು ಇನ್ನಷ್ಟು “ಜನಸ್ನೇಹಿ’ ಆಗಿ ಕೆಲಸ ಮಾಡಬೇಕು. ಬಡವರು, ಅಮಾಯಕರು, ಮಹಿಳೆಯರು ಠಾಣೆಗೆ ಬಂದಾಗ ವಿಶ್ವಾಸ ಮೂಡಿಸಬೇಕು.

ಈ ಮೂರು ಸೂತ್ರಗಳ ಮೂಲಕ ಇಲಾಖೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಜತೆಗೆ, ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next