ಹೈದರಾಬಾದ್: 24 ರಾಜ್ಯಗಳು ಮತ್ತು ಎಂಟು ಮೆಟ್ರೋಪಾಲಿಟನ್ ನಗರಗಳಿಗೆ ಸೇರಿದ 66.9 ಕೋಟಿ ಜನರ ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಕದಿಯುವುದು, ಹಿಡಿದಿಟ್ಟುಕೊಳ್ಳುವುದು ಮತ್ತು ಮಾರಾಟ ಮಾಡುವಲ್ಲಿ ತೊಡಗಿಸಿಕೊಂಡಿದ್ದ ಖತರ್ನಾಕ್ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಸೈಬರಾಬಾದ್ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಬಂಧಿತ ಆರೋಪಿ ವಿನಯ್ ಭಾರದ್ವಾಜ್ ಎನ್ನುವವನಾಗಿದ್ದು, ಎಡ್ಯೂ-ಟೆಕ್ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ಹೊಂದಿದ್ದು, ಜಿಎಸ್‌ಟಿ, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಪ್ರಮುಖ ಇಕಾಮರ್ಸ್ ಪೋರ್ಟಲ್‌ಗಳಂತಹ ಪ್ರಮುಖ ಸಂಸ್ಥೆಗಳ, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಫಿನ್ಟೆಕ್ ಕಂಪನಿಗಳ ಗ್ರಾಹಕರ ಡೇಟಾವನ್ನು ಹೊಂದಿದ್ದ ಎಂದು ಪೊಲೀಸರ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಬಂಧಿಸಲಾದ ಆರೋಪಿಯು 104 ವಿಭಾಗಗಳಲ್ಲಿ ನಿರ್ವಹಿಸಲಾದ ಸುಮಾರು 66.9 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡೇಟಾವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಆರೋಪಿ ಬಳಿಯಿರುವ ಕೆಲವು ಪ್ರಮುಖ ದತ್ತಾಂಶಗಳಲ್ಲಿ ರಕ್ಷಣಾ ಸಿಬಂದಿ, ಸರಕಾರಿ ನೌಕರರು, ಪ್ಯಾನ್ ಕಾರ್ಡ್ ಹೊಂದಿರುವವರು, 9, 10, 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ದೆಹಲಿ ವಿದ್ಯುತ್ ಗ್ರಾಹಕರು, ಡಿ-ಮ್ಯಾಟ್ ಖಾತೆದಾರರು, ಮೊಬೈಲ್ ಸಂಖ್ಯೆಗಳ ಮಾಹಿತಿ ಸೇರಿವೆ. ವಿವಿಧ ವ್ಯಕ್ತಿಗಳು, NEET ವಿದ್ಯಾರ್ಥಿಗಳು, ಹೆಚ್ಚಿನ ನಿವ್ವಳ ಮೌಲ್ಯದ ವ್ಯಕ್ತಿಗಳು, ವಿಮಾದಾರರು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವ ಇತರರದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆರೋಪಿಯು ಹರಿಯಾಣದ ಫರಿದಾಬಾದ್‌ನಲ್ಲಿರುವ “InspireWebz” ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಮತ್ತು ಕ್ಲೌಡ್ ಡ್ರೈವ್ ಲಿಂಕ್‌ಗಳ ಮೂಲಕ ಗ್ರಾಹಕರಿಗೆ ಡೇಟಾಬೇಸ್ ಮಾರಾಟ ಮಾಡುತ್ತಿದ್ದ. ಪೊಲೀಸರು ಎರಡು ಮೊಬೈಲ್ ಫೋನ್‌ಗಳು ಮತ್ತು ಎರಡು ಲ್ಯಾಪ್‌ಟಾಪ್‌ಗಳು ಮತ್ತು ಸರಕಾರಿ, ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರುವ 135 ವಿಭಾಗಗಳ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ.