Advertisement
ನಗರದ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಕಳೆದ ವರ್ಷ ಆರೂವರೆ ಸಾವಿರ ಪ್ರಕರಣಗಳು ದಾಖಲಾಗಿದ್ದು, 2062 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಈ ವರ್ಷ ನವೆಂಬರ್ ಅಂತ್ಯದವರೆಗೆ ಸೈಬರ್ ಪ್ರಕರಣಗಳು 9 ಸಾವಿರ ಗಡಿ ದಾಟಿದೆ. ಆದರೆ, ಇದರಲ್ಲಿ 930 ಕೇಸ್‌ಗಳನ್ನು ಮಾತ್ರ ಪತ್ತೆ ಹಚ್ಚಲಾಗಿದೆ. ಅಂದರೆ ಪ್ರಕರಣಗಳ ಇತ್ಯರ್ಥ ಶೇ.10ರಷ್ಟು ಮಾತ್ರ. ಇನ್ನುಳಿದ ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದು, ಕೆಲ ಪ್ರಕರಣಗಳ ಆರೋಪಿಗಳು ನೆರೆ ರಾಜ್ಯ, ವಿದೇಶಗಳಲ್ಲಿ ತಲೆಮರೆಸಿಕೊಂಡಿರುವುದರಿಂದ ಅವರ ಪತ್ತೆಯಾಗಿಲ್ಲ.
Related Articles
Advertisement
ಮತ್ತೂಂದೆಡೆ ಉತ್ತರ ಭಾರತ ಮೂಲದ ಆರೋಪಿಗಳು ಗ್ರಾಮೀಣ ಭಾಗದ ಜನರ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಡೆದು ವಂಚನೆ ಮಾಡುತ್ತಿದ್ದಾರೆ. ಈ ವ್ಯಕ್ತಿಗಳು ಕೆಲವೊಮ್ಮೆ ಸಿಕ್ಕರೆ, ಇನ್ನು ಕೆಲವೊಮ್ಮೆ ಒಮ್ಮೆ ವಂಚಿಸಿ ನಾಪತ್ತೆಯಾಗುತ್ತಿದ್ದಾರೆ ಎನ್ನುತ್ತಾರೆ ಸೈಬರ್ ಕ್ರೈಂ ಪೊಲೀಸರು.
ಯಾವ ವಿಭಾಗದಲ್ಲಿ ಸೈಬರ್ ಕ್ರೈಂ ಹೆಚ್ಚು?: ವಿವಿಧ ಭಾಗಗಳಿಗೆ ಹೋಲಿಸಿದರೆ ಈಶಾನ್ಯ ವಿಭಾಗದ ಸೆನ್ ಠಾಣೆಯಲ್ಲಿ ಅಧಿಕ ಎಂದರೆ 1443 ಕೇಸ್ ದಾಖಲಾಗಿವೆ. ನಂತರ ಪಶ್ಚಿಮ ವಿಭಾಗ 1297 ಕೇಸ್, ದಕ್ಷಿಣ ವಿಭಾಗ 1237, ಉತ್ತರ ವಿಭಾಗದಲ್ಲಿ 1160, ಆಗ್ನೇಯ ವಿಭಾಗ 1115, ವೈಟ್ ಫೀಲ್ಡ್ 942, ಪೂರ್ವ ವಿಭಾಗ 833, ಕೇಂದ್ರ ವಿಭಾಗ 888 ಹಾಗೂ ಸೈಬರ್ ಕ್ರೈಂ ಠಾಣೆ ಸೇರಿ 9050 ಕೇಸ್ ದಾಖಲಾಗಿವೆ.
ತಕ್ಷಣ ಸಹಾಯವಾಣಿ ಸಂಪರ್ಕಿಸಿ : ಎರಡು ವರ್ಷದಿಂದ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಸೈಬರ್ ಇನ್ಫಾರ್ ಮೆಷನ್ ರಿಪೋರ್ಟ್( ಸಿಐಆರ್). ಯಾವುದೇ ವಂಚನೆ ಗೊತ್ತಾಗುತ್ತಿದ್ದಂತೆ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ, ಸೈಬರ್ ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದಾಗ, ವಂಚಕನ ಬ್ಯಾಂಕ್ ಖಾತೆಯನ್ನು ಕ್ಷಣಾರ್ಥದಲ್ಲೇ ಬ್ಲಾಕ್ ಮಾಡಲಾಗುತ್ತದೆ. ನಂತರ ವಂಚನೆಗೊಳಗಾದವರಿಗೆ ಹಣ ಹಿಂದಿರುಗಿಸಲಾಗುತ್ತದೆ. ಇದು ಸೈಬರ್ ಕ್ರೈಂ ಪ್ರಕರಣಗಳು ಕಡಿಮೆಯಾಗಲು ಸಹಾಯವಾಗುತ್ತಿದೆ ಎನ್ನುತ್ತಾರೆ ಸೈಬರ್ ಸಹಾಯವಾಣಿ ಅಧಿಕಾರಿಗಳು.
ಯಾವ ವಂಚನೆ ಹೆಚ್ಚು? : ಸೈಬರ್ ವಂಚಕರು ವಿವಿಧ ಸ್ವರೂಪಗಳಲ್ಲಿ ಜನರನ್ನು ಮರಳು ಮಾಡುತ್ತಾರೆ. ಡೆಬಿಟ್, ಕ್ರೆಡಿಟ್ ಕಾರ್ಡ್ ಅಪ್ ಡೇಟ್ ಮಾಡಬೇಕು. ಆನ್‌ಲೈನ್ ಮನಿ ಟ್ರಾನ್ಸ್‌ಫರ್ ಹೆಸರಿನಲ್ಲಿ ಈ ವರ್ಷ 3,838 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 2,886 ಕೇಸ್ ದಾಖ ಲಾಗಿತ್ತು. ನಗದು ಬಹುಮಾನ, ಲಾಟರಿ ಹಾಗೂ ಲೋನ್, ಒಎಲ್‌ಎಕ್ಸ್ ಮೋಸ ಸೇರಿದಂತೆ 1753 ಪ್ರಕರಣ ದಾಖಲಾಗಿವೆ. ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ 748, ಸಾಮಾಜಿಕ ಜಾಲತಾಣ ದುರ್ಬಳಕೆ 557, ಸಿಮ್ ಕಾರ್ಡ್ ಸ್ಕಿಮಿಂಗ್, ಕ್ರಿಪ್ಟೋ ಕರೆನ್ಸಿ, ಮಾಟ್ರಿಮೋನಿ, ರಫ್ತು ಮತ್ತು ಆಮದು(ಇ-ಮೇಲ್ ಮೂಲಕ) ವಂಚನೆ ಸೇರಿ ಒಟ್ಟು 9,050 ಕೇಸ್ ದಾಖಲಾಗಿವೆ.
ಪೊಲೀಸ್ ಸಹಾಯವಾಣಿ 112 ಮೂಲಕ ಸೈಬರ್ ಕೇಸ್ ಗಳನ್ನು ಕೆಲ ಕ್ಷಣಗಳಲ್ಲೇ ಬಗೆಹರಿಸಲಾಗಿದೆ. ಮತ್ತೂಂದೆಡೆ ಸೈಬರ್ ಠಾಣೆ ಪೊಲೀಸರಿಗೆ ಖಾಸಗಿ ಸಂಸ್ಥೆಯಿಂದ ಸೂಕ್ತ ತರಬೇತಿ ನೀಡಲಾಗುತ್ತಿದೆ. ಜತೆಗೆ ಡಿಎಫ್ಎ ಸೇರಿ ಹೊಸ ಮಾದರಿಯ ಉಪಕರಣಗಳನ್ನು ಖರೀಸಲಾಗಿದೆ. -ಡಾ ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ
-ಮೋಹನ್ ಭದ್ರಾವತಿ