ಬೆಂಗಳೂರು: ಸಾಲದ ಕಂತನ್ನು ಕಡಿಮೆ ಮಾಡುವುದಾಗಿ ಒಟಿಪಿ ಪಡೆದ ಸೈಬರ್ ವಂಚಕರು ಲಕ್ಷಾಂತರ ರೂ. ದೋಚಿರುವ ಪ್ರಕರಣ ಬೆಳಕಿಗೆಬಂದಿದೆ. ಈ ಸಂಬಂಧ ಗಂಗಾಧರ ನಗರ ನಿವಾಸಿ ಆರ್.ರಘು ಎಂಬವರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೆನ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ರಘು 2019ರಲ್ಲಿ ಖಾಸಗಿ ಫೈನಾನ್ಸ್‌ವೊಂದರಲ್ಲಿ 1,45 ಲಕ್ಷ ರೂ. ಸಾಲ ಪಡೆದುಕೊಂಡು, 7ತಿಂಗಳ ಕಂತು ಪಾವತಿಸಿದ್ದರು. ಕೊರೊನಾ ಕಾರಣ ಬಾಕಿ ಕಟ್ಟಿರಲಿಲ್ಲ. ಈ ಮಧ್ಯೆ ಜುಲೈನಲ್ಲಿ ಅಪರಿಚಿತರೊಬ್ಬರು ಕರೆ ಮಾಡಿ, ಸಾಲ ಪಡೆದಿದ್ದ ಖಾಸಗಿ ಫೆನಾನ್ಸ್ ಹೆಸರು ಹೇಳಿದ್ದಾರೆ.
ಇದನ್ನೂ ಓದಿ;- ಖಂಡ್ರೆ ಪರ ಸಚಿವ ಚವ್ಹಾಣ ಪ್ರಚಾರ
ಅದನ್ನು ನಂಬಿದ ರಘು, ಅಪರಿಚಿತರ ಜತೆ ಚರ್ಚಿಸಿದ್ದಾರೆ. ಈ ವೇಳೆ ಆರೋಪಿಗಳು, ಸಾಲದ ಕಂತನ್ನು ಕಡಿಮೆ ಮಾಡಲಾಗುತ್ತದೆ, ತಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ ಹೇಳುವಂತೆ ತಿಳಿಸಿ, ಪಡೆದುಕೊಂಡಿದ್ದಾರೆ. ಕೆಲ ದಿನಗಳ ಬಳಿಕ ಫೈನಾನ್ಸ್ ಕಂಪನಿ ಬಳಿ ಹೋದಾಗ, ಹಳೇ ಲೋನ್ ಜತೆಗೆ ಹೊಸದಾಗಿ 1,45 ಲಕ್ಷ ರೂ. ಹೊಸ ಲೋನ್ ಪಡೆದುಕೊಂಡಿದ್ದೀರಿ ಎಂದಿದ್ದಾರೆ. ಅದರಿಂದ ಗಾಬರಿಗೊಂಡ ರಘು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾರ್ವಜನಿಕರೇ ಎಚ್ಚರಿಕೆ
ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮಾನಾಸ್ಪದ ಕರೆಗಳು, ಕ್ಯೂಆರ್‌ಕೋಡ್ ಗಳು ಬಂದಲ್ಲಿ ತಡಮಾಡಬೇಡಿ. ಯಾವುದೇ ಮಾಹಿತಿ ಅಥವಾ ಸ್ಕ್ಯಾನ್ ಮಾಡಬೇಡಿ.ಕೂಡಲೇ ಸಮೀಪದ ಸೈಬರ್ ಠಾಣೆಯನ್ನು ಸಂಪರ್ಕಿಸಿ.