Advertisement

ಸೈಬರ್ ಭದ್ರತೆ ಈಗ ಜಾಗತಿಕ ಅಗತ್ಯ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

08:55 PM Sep 01, 2021 | Team Udayavani |

ಬೆಂಗಳೂರು: ಡಿಜಿಟಲ್ ಕಲಿಕೆಗೆ ಒತ್ತು ನೀಡುತ್ತಿರುವ ರಾಜ್ಯ ಸರಕಾರವು ಸೈಬರ್ ಭದ್ರತೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ ಹಾಗೂ ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ನಗರದ ಸರಕಾರಿ ರಾಮನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್ ಕಾಲೇಜ್ (ಆರ್.ಸಿ.ಕಾಲೇಜ್) ಹಮ್ಮಿಕೊಂಡಿದ್ದ ಸಿಬ್ಬಂದಿ ಅಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ʼಡಿಜಿಟಲ್ ಯುಗದಲ್ಲಿ ಕಾನೂನು, ನೈತಿಕತೆ ಹಾಗೂ ಸಾಮಾಜಿಕ ಅಂಶಗಳುʼ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸೈಬರ್ ಭದ್ರತೆ ಎನ್ನುವುದು ಈಗ ಜಾಗತಿಕ ಅಗತ್ಯ. ಅಪರಾಧಗಳ ಸ್ವರೂಪ ಬದಲಾದಂತೆಲ್ಲ ಈ ಭದ್ರತೆಯ ಅಗತ್ಯವೂ ಹೆಚ್ಚಾಗುತ್ತಿದೆ ಎಂದ ಸಚಿವರು, ಸಮಾಜದ ಪ್ರತಿ ಹಂತದಲ್ಲೂ ಈಗ ಡಿಜಿಟಲ್ ವ್ಯವಹಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಗೆ ಸರಕಾರ ಒತ್ತು ಕೊಡುತ್ತಿದೆ. ಈ ಹಿನ್ನೆಲೆ ಪಾಲಿಟೆಕ್ನಿಕ್ ಕಲಿಕೆಯಲ್ಲಿ ಹೊಸದಾಗಿ ʼಸೈಬರ್ ಭದ್ರತೆʼ ವಿಷಯವನ್ನೂ ಪರಿಚಯಿಸಲಾಗಿದೆ ಎಂದು ಹೇಳಿದರು.

ಡಿಜಿಟಲ್ ವೇದಿಕೆಗಳಲ್ಲಿ ನಡೆಯುವ ವಂಚನೆಗಳನ್ನು ತಡೆಯಲು ಸೈಬರ್ ಕಾನೂನು ಹಾಗೂ ಸೈಬರ್ ಭದ್ರತೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜತೆಗೆ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ನೈತಿಕ ಬದ್ಧತೆಯೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸಿಐಡಿ ಪೊಲೀಸ್ ವಿಭಾಗದ ವರಿಷ್ಠಾಧಿಕಾರಿ ಎಂ.ಡಿ.ಶರತ್ ಅವರು, ಸೈಬರ್ ಅಪರಾಧಗಳ ಸ್ವರೂಪ ಹಾಗೂ ಅವುಗಳನ್ನು ಹತ್ತಿಕ್ಕುವ, ಅವುಗಳ ಸುಳಿಗೆ ಸಿಕ್ಕಿಕೊಳ್ಳದಿರುವ ಮಾರ್ಗಗಗಳ ಬಗ್ಗೆ ಕೂಲಂಕಶವಾಗಿ ಮಾತನಾಡಿದರು.

Advertisement

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಲಕ್ಷಣ್ ಕುಲಗೋಡ್ ವಿಶೇಷ ಭಾಷಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next