Advertisement

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

12:57 AM Dec 29, 2024 | Team Udayavani |

ಮಂಗಳೂರು: ಸೈಬರ್‌ ವಂಚಕರ ಕಾರ್ಯಸ್ಥಾನ ಬದಲಾಗಿದೆ, ಕಾರ್ಯತಂತ್ರವೂ ಬದಲಾಗಿದೆ!
ಹೌದು. ಕೆಲವು ತಿಂಗಳುಗಳ ಹಿಂದಿನವರೆಗೆ ಈ ವಂಚಕರ ಕಾರ್ಯಸ್ಥಾನ ಉತ್ತರ ಭಾರತದ ರಾಜ್ಯಗಳ್ಳೋ, ರಾಜಧಾನಿ ದಿಲ್ಲಿಯ ಯಾವುದೋ ಪ್ರದೇಶ ಎನ್ನುವಂತಿತ್ತು. ಆದರೆ ಈಗ ವಂಚಕರೆಲ್ಲ ವಿದೇಶಗಳಿಂದ ಕಾರ್ಯಾಚರಣೆಗೆ ಇಳಿದಿದ್ದಾರೆ. ಹಾಗೆಯೇ ಇಂಟರ್‌ನೆಟ್‌ ಕರೆ ಇತ್ಯಾದಿ ಬದಲಿಗೆ ನೇರವಾಗಿ ವಾಟ್ಸ್‌ಆ್ಯಪ್‌ ಕರೆ, ಫೋನ್‌ ಕರೆ ಮಾಡಲು ತೊಡಗಿದ್ದಾರೆ. ವಂಚನೆಗೆ ಬಳಸುತ್ತಿರುವುದು ನಮ್ಮ ದೇಶದ, ಭಾಷೆ ಗೊತ್ತಿರುವವರನ್ನೇ.
ಇದಕ್ಕಿಂತ ಆಘಾತಕಾರಿ ಸಂಗತಿ ಎಂದರೆ ಈ ವಿದೇಶಿ ವಂಚಕರಿಗೆ ಭಾರತದ ಸಿಮ್‌ ಕಾರ್ಡ್‌, ಬ್ಯಾಂಕ್‌ ಖಾತೆ ವಿವರ ಇತ್ಯಾದಿ ಎಲ್ಲ ಸಹಕಾರ ನೀಡುತ್ತಿರುವವರು ಸ್ಥಳೀಯರೇ. ಕೆಲವು ಸೈಬರ್‌ ಪ್ರಕರಣಗಳಲ್ಲಿ ವಂಚನೆ ಜಾಲದ ಮೂಲ ವ್ಯಕ್ತಿಗಳು ಚೀನ, ತೈವಾನ್‌, ಥಾಯ್ಲೆಂಡ್‌ ಮುಂತಾದ ವಿದೇಶಗಳಲ್ಲಿ ನೆಲೆಸಿ ವಂಚನೆ ಎಸಗುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಮಂದಿ ದುಬೈ, ಕಾಂಬೋಡಿಯ ಮತ್ತಿತರ ದೇಶಗಳಲ್ಲಿ ಇರುವ ಭಾರತೀಯರನ್ನೇ ನೇಮಿಸಿಕೊಂಡು ಭಾರತೀಯರ ಹಣ ಲೂಟಿ ಮಾಡುತ್ತಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಸಿಮ್‌ಕಾರ್ಡ್‌ ವಿದೇಶಕ್ಕೆ
ಮಂಗಳೂರು ಸಹಿತ ಕರಾವಳಿ ಭಾಗದ ಹಲವೆಡೆ ಯಿಂದ ವಿದೇಶಕ್ಕೆ ನೂರಾರು ಸಿಮ್‌ ಕಾರ್ಡ್‌ಗಳನ್ನು ಕಳುಹಿಸುತ್ತಿರು ವುದು ಪೊಲೀಸ್‌ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ವಂಚಕರು ಈ ಕಾರ್ಡ್‌ಗಳನ್ನು ಬಳಸಿಕೊಂಡು, ದುಬೈ ಮತ್ತಿತರ ದೇಶಗಳಲ್ಲಿರುವ ಭಾರತೀಯರನ್ನೇ ಸಹಾಯಕರನ್ನಾಗಿ ಇಟ್ಟುಕೊಂಡು ವಂಚನೆಯ ಖೆಡ್ಡಾ ತೋಡುತ್ತಿದ್ದಾರೆ. ಭಾರತೀಯ ಸಿಮ್‌ ಸಂಖ್ಯೆಗಳೇ ಆದರೆ ಭಾರತೀಯರನ್ನು ನಂಬಿಸಿ ವಂಚಿಸುವುದು ಸುಲಭ ಎಂಬ ಲೆಕ್ಕಾಚಾರ ವಂಚಕರದು ಎಂಬುದು ಪೊಲೀಸರ ಮಾಹಿತಿ.

ದ.ಕ. ಜಿಲ್ಲೆಯ ಬೆಳ್ತಂಗಡಿ, ಮಂಗಳೂರು ಸಹಿತ ಹಲವೆಡೆಯಿಂದ 500ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ವಿದೇಶಕ್ಕೆ ರವಾನಿಸಿದ್ದ ಇಬ್ಬರನ್ನು ಪೊಲೀಸರು ಕೆಲವು ತಿಂಗಳ ಹಿಂದೆ ಬಂಧಿಸಿದ್ದರು. ಈ ಆರೋಪಿಗಳು ತಮ್ಮ ಪರಿಚಿತರಿಗೆ 200ರಿಂದ 300 ರೂ. ಗಳನ್ನು ನೀಡಿ ಸಿಮ್‌ ಖರೀದಿಸಿ ಸೈಬರ್‌ ವಂಚಕರಿಗೆ ರವಾನಿಸುತ್ತಿದ್ದರು.

ಷೇರು ಮಾರುಕಟ್ಟೆಯಲ್ಲಿ ಹೂಡಿ ಕೆಯ ನೆಪದಲ್ಲಿ ವ್ಯಕ್ತಿಯೋರ್ವರಿಂದ 10.84 ಲ.ರೂ.ಗಳನ್ನು ವರ್ಗಾಯಿಸಿ ಕೊಂಡು ವಂಚಿಸಿದ ಬಗ್ಗೆ ಮಂಗಳೂರಿ ನಲ್ಲಿ ಸೆಪ್ಟಂಬರ್‌ನಲ್ಲಿ ಪ್ರಕರಣ ದಾಖ ಲಾಗಿತ್ತು. ಇದರ ತನಿಖೆಯ ವೇಳೆ ಓರ್ವ ಆರೋಪಿ ಭಾರತದಿಂದ 500ಕ್ಕೂ ಅಧಿಕ ವಿವಿಧ ಕಂಪೆನಿಗಳ ಸಿಮ್‌ಗ ಳನ್ನು ದುಬೈಯಲ್ಲಿ ಸೈಬರ್‌ ವಂಚಕರಿಗೆ ಮಾರಾಟ ಮಾಡಿದ್ದ ಎಂಬುದು ಗೊತ್ತಾಗಿತ್ತು. ಇದೇ ರೀತಿ ಇತರ ಹಲವು ಪ್ರಕರಣಗಳಲ್ಲಿ ಸಿಮ್‌ಗಳ ದುರ್ಬಳಕೆ ಆಗಿರಬಹುದು ಎಂಬ ಬಗ್ಗೆ ಪೊಲೀಸರ ತನಿಖೆ ಪ್ರಗತಿಯಲ್ಲಿದೆ.

Advertisement

3ರಿಂದ 5 ಸಾ.ರೂ.ಗಳಿಗೆ ಖಾತೆ ಮಾರಾಟ
ಜುಲೈಯಲ್ಲಿ ಪಾರ್ಟ್‌ಟೈಮ್‌ ಜಾಬ್‌ ಬಗ್ಗೆ ಮೆಸೇಜ್‌ ಕಳುಹಿಸಿ 28.18 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಲಾಗಿತ್ತು. ಈ ಪ್ರಕರಣದಲ್ಲಿ ಬೆಂಗಳೂರು ಮತ್ತು ಮೈಸೂರು ಮೂಲದ 5 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ ಇಬ್ಬರು ಆರೋಪಿಗಳು ಹಲವು ಬ್ಯಾಂಕ್‌ಗಳಲ್ಲಿ ಬೇರೆಯವರ ಹೆಸರಿನಲ್ಲಿ ಹಾಗೂ ತಮ್ಮ ಹೆಸರಿನಲ್ಲಿ ವಂಚಕರಿಗೆ ಬ್ಯಾಂಕ್‌ ಖಾತೆ ಮಾಡಿಸಿಕೊಟ್ಟಿದ್ದರು. ಅದಕ್ಕೆ 3ರಿಂದ 5 ಸಾವಿರ ರೂ.ಗಳನ್ನು ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಯಾರದ್ದೋ ಖಾತೆಗೆ ಹಣ ಜಮೆಯಾಗಿ ಅದನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು.

ದುಬೈಯಲ್ಲಿ ಹಣ ವಿಥ್‌ಡ್ರಾ
ಈಗ ವಿದೇಶದಲ್ಲಿಯೇ ಕುಳಿತು ಭಾರತದಲ್ಲಿರುವವರ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಿದೇಶದಲ್ಲಿಯೇ ಹಣ ಪಡೆದಿರುವ ಸಂಗತಿಯೂ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ದಾಖಲಾಗಿದ್ದ ಸೈಬರ್‌ ಪ್ರಕರಣವೊಂದರ ತನಿಖೆ ನಡೆಸಿದಾಗ ದುಬೈಯಲ್ಲಿರುವ ವ್ಯಕ್ತಿಯೋರ್ವರ ಖಾತೆಗೆ ವಂಚನೆಯ ಹಣ ಸಂದಾಯವಾಗಿ ಅಲ್ಲಿಯೇ ಅದನ್ನು ಪಡೆದುಕೊಳ್ಳಲಾಗಿತ್ತು ಎನ್ನಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ, ವಿದೇಶದಲ್ಲಿ ಉದ್ಯೋಗ, ಸಿಮ್‌ಕಾರ್ಡ್‌ ಮಾರಾಟ ಮೊದಲಾದ ಹಲವು ಪ್ರಕರಣಗಳಲ್ಲಿ ಕೆಲವರನ್ನು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಸಿಐಡಿ ಹಾಗೂ ಇತರ ಉನ್ನತ ಮಟ್ಟದ ಏಜೆನ್ಸಿಗಳಿಂದಲೂ ತನಿಖೆಯ ಬಗ್ಗೆಯೂ ಕ್ರಿಯಾಶೀಲವಾಗಿದ್ದೇವೆ.
-ಅನುಪಮ್‌ ಅಗರ್‌ವಾಲ್‌,
ಪೊಲೀಸ್‌ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next