ನವದೆಹಲಿ: ಚೀನಾ ಪ್ರೇರಿತ ಹ್ಯಾಕರ್‌ಗಳ ದೊಡ್ಡ ಗುಂಪೊಂದು ಜಗತ್ತಿನಾದ್ಯಂತ ಹಲವು ಸರ್ಕಾರಗಳನ್ನು ಗುರಿಯಾಗಿಸಿಕೊಂಡು ಬೃಹತ್ ಸೈಬರ್ ಬೇಹುಗಾರಿಕೆಯನ್ನು ನಡೆಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.
ಗೂಗಲ್ ಬೆಂಬಲಿತ ಸೈಬರ್‌ಭದ್ರತಾ ಸಂಸ್ಥೆ ಮ್ಯಾನ್‌ಡಯೆಂಟ್ ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಹ್ಯಾಕರ್‌ಗಳು ನೂರಾರು ಸಂಸ್ಥೆಗಳ ಕಂಪ್ಯೂಟರ್ ಫೈರ್‌ವಾಲ್‌ನೊಳಕ್ಕೆ ನುಗ್ಗಿ, “ಚೀನಾ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಂಟು ಹೊಂದಿರುವ ಪ್ರಮುಖ ಉದ್ಯೋಗಿಗಳ ಇಮೇಲ್’ ಗಳನ್ನು ಕಳವು ಮಾಡಿದ್ದಾರೆ ಎಂದು ಮ್ಯಾನ್‌ಡಯೆಂಟ್ ಹೇಳಿದೆ. 2021ರ ಆರಂಭದಲ್ಲಿ ಮೈಕ್ರೋಸಾಫ್ಟ್ ಎಕ್ಸ್‌ಚೇಂಜ್‌ನ ಸಾಮೂಹಿಕ ಹ್ಯಾಕಿಂಗ್ ನಡೆದ ಬಳಿಕ ಚೀನಾ ಬೆಂಬಲದಲ್ಲಿ ನಡೆದ ಅತಿದೊಡ್ಡ ಸೈಬರ್ ಬೇಹುಗಾರಿಕೆ ಪ್ರಕರಣ ಇದಾಗಿದೆ.
ಜನಪ್ರಿಯ ಇಮೇಲ್ ಭದ್ರತಾ ವ್ಯವಸ್ಥೆ ಬರ್ರಾಕೂಡಾ ಸಾಫ್ಟ್ವೇರ್‌ನಲ್ಲಿರುವಂಥ ಸಣ್ಣ ಲೋಪದೋಷವನ್ನು ದುರ್ಬಳಕೆ ಮಾಡಿಕೊಂಡು ಈ ದಾಳಿ ನಡೆಸಲಾಗಿದೆ. ದುರುದ್ದೇಶಪೂರಿತ ಕೋಡ್‌ಗಳ ಮೂಲಕ ಸಂದೇಶಗಳನ್ನೂ ರವಾನಿಸಲಾಗಿದೆ. ಈ ಸೈಬರ್ ಬೇಹುಗಾರಿಕೆಯು ಮೇ ತಿಂಗಳಲ್ಲಿ ಪತ್ತೆಯಾಗಿದ್ದಾದರೂ, ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಈ ಪ್ರಕ್ರಿಯೆ ಆರಂಭವಾಗಿತ್ತು ಎಂದು ಮ್ಯಾನ್‌ಡಯೆಂಟ್ ಮುಖ್ಯ ತಾಂತ್ರಿಕ ಅಧಿಕಾರಿ ಚಾರ್ಲ್ಸ್ ಕಾರ್‌ಮಾಕಲ್ ಹೇಳಿದ್ದಾರೆ.
16 ದೇಶಗಳು ಟಾರ್ಗೆಟ್
ಸೈಬರ್ ಬೇಹುಗಾರರು ಒಟ್ಟು 16 ದೇಶಗಳನ್ನು ಟಾರ್ಗೆಟ್ ಮಾಡಿಕೊಂಡು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ಮಾಡಿದ್ದರು. ಈ ಸಂಸ್ಥೆಗಳ ಪೈಕಿ ಶೇ.55ರಷ್ಟು ಅಮೆರಿಕದವುಗಳಾಗಿದ್ದರೆ, ಶೇ.22 ಏಷ್ಯಾ ಪೆಸಿಫಿಕ್ ಮತ್ತು ಶೇ.24ರಷ್ಟು ಯುರೋಪ್, ಮಧ್ಯ ಪ್ರಾಚ್ಯ ಮತ್ತು ಆಫ್ರಿಕಾದ ಸಂಸ್ಥೆಗಳು. ಆಗ್ನೇಯ ಏಷ್ಯಾದ ವಿದೇಶಾಂಗ ಸಚಿವಾಲಯಗಳ ಮೇಲೂ ಸೈಬರ್ ಬೇಹುಗಾರಿಕೆ ನಡೆದಿದೆ ಎಂದು ವರದಿ ಹೇಳಿದೆ.