ಹೊಸದಿಲ್ಲಿ: ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್ ನಲ್ಲಿ ನಡೆಯಲಿರುವ 2018ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ವನಿತಾ ಕುಸ್ತಿಪಟುಗಳು ಗರಿಷ್ಠ ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಏಶ್ಯನ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದ 65 ಕೆ.ಜಿ. ಕುಸ್ತಿ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ನವಜೋತ್ ಕೌರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂಬರುವ ಕಾಮನ್ವೆಲ್ತ್ ಗೇಮ್ಸ್ ನತ್ತ ಚಿತ್ತ ನೆಟ್ಟಿರುವುದಾಗಿ ತಿಳಿಸಿರುವ ಕೌರ್, “ಸದ್ಯ ಇಂಡಿಯನ್ ರೆಸ್ಲಿಂಗ್ ಕ್ಯಾಂಪ್‌ನಲ್ಲಿರುವ ನಮ್ಮೆಲ್ಲರ ದೃಷ್ಟಿಯೂ ಎ. 4ರಿಂದ ಆಸ್ಟ್ರೇಲಿಯದಲ್ಲಿ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್‌ನತ್ತ ಇದೆ’ ಎಂದಿದ್ದಾರೆ.
ಗಾಯದ ಕಾರಣ ಕಾಮನ್ವೆಲ್ತ್ ಗೇಮ್ಸ್ ಅರ್ಹತಾ ಪರೀಕ್ಷೆಯಲ್ಲಿ ಅವ ಕಾಶ ವಂಚಿತರಾಗಿದ್ದ ಕೌರ್ ಕ್ರೀಡಾ ಕೂಟದಿಂದ ಹೊರಗುಳಿದಿದ್ದಾರೆ. ಆದರೆ ಕೂಟಕ್ಕಾಗಿ ಯುವ ತಂಡ ವನ್ನು ಸಜ್ಜುಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿರುವ ಕೌರ್ 65 ಕೆ.ಜಿ. ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ದಿವ್ಯ ಕಕ್ರನ್ ಅವರಿಗೆ ತರಬೇತಿ ನೀಡುತ್ತಿದ್ದಾರೆ.
“ಯುವ ರೆಸ್ಲರ್ ದಿವ್ಯ ಸುಧಾರಣೆಗೊಳ್ಳುತ್ತಿರುವುದರ ಬಗ್ಗೆ ನಾನು ಖುಷಿಗೊಂಡಿದ್ದೇನೆ. ಈ ಬಾರಿಯ ಕೂಟದ ಆರು ವಿಭಾಗಗಳಲ್ಲೂ ವನಿತೆಯರು ಪದಕ ಗೆಲ್ಲುವುದಾಗಿ ನಾನು ಧೈರ್ಯದಿಂದ ಹೇಳಬಲ್ಲೆ. ಗೆಲ್ಲುವ ಪದಕಗಳಲ್ಲಿ ಹೆಚ್ಚಿನವು ಚಿನ್ನವೇ ಆಗಿರಲಿವೆ’ ಎಂದು ಅನು ಭವಿ ಕುಸ್ತಿಪಟು ಕೌರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ವೈಯಕ್ತಿಕವಾಗಿ ತಾನು ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿರುವ ಕೌರ್, “ಅಕ್ಟೋಬರ್ ತಿಂಗಳಲ್ಲಿ ಜಕಾರ್ತದಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್‌ಗೆ ಆಯ್ಕೆಯಾಗುವತ್ತ ಮತ್ತು ಪದಕ ಗೆಲ್ಲುವ ಗುರಿ ಹೊಂದಿದ್ದೇನೆ’ ಎಂದಿದ್ದಾರೆ.
ಮುಂಚಿತ ಪ್ರಯಾಣಕ್ಕೆ ಬ್ರೇಕ್
ಹೊಸದಿಲ್ಲಿ: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲಲು ಅನುಕೂಲವಾಗುವಂತೆ ಮುಂಚಿತವಾಗಿ ಆಸ್ಟ್ರೇಲಿಯಕ್ಕೆ ತೆರಳಿ, ತರಬೇತಿ ನಡೆಸಲು ಬಯಸಿದ್ದ ಕೆಲವು ಕುಸ್ತಿಪಟುಗಳ ಕೋರಿಕೆಯನ್ನು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ)ತಳ್ಳಿ ಹಾಕಿದೆ. ಇದರಿಂದ ತಂಡವು ಸ್ಪರ್ಧೆ ಆರಂಭಗೊಳ್ಳುವುದಕ್ಕೆ ಎರಡು ದಿನ ಮುಂಚಿತವಾಗಿ ಅಂದರೆ ಎ. 10ರಂದು ಆಸ್ಟ್ರೇಲಿಯಕ್ಕೆ ತೆರಳಲಿದೆ.